ಬೆಂಗಳೂರು, (ಜೂನ್ 30): ಗ್ಯಾರಂಟಿ ಯೋಜನೆಗಳಲ್ಲಿ (guarantee schemes) ಆಗುತ್ತಿರುವ ಅಕ್ರಮಗಳನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಫಲ ತಲುಪಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ (Karnataka Congress Government) ಮುಂದಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಲ್ಲಿ ಫಿಲ್ಟರ್ ಕಾರ್ಯ ನಡೆದಿದ್ದು, ಅರ್ಹರಿಗೆ ಅಷ್ಟೇ ಸೌಲಭ್ಯ ದೊರೆಯಲಿದೆ. ಹೌದು..ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಯ (gruha jyothi scheme) ಫಲಾನುಭವಿಗಳ ಮನೆ – ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ.
ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ
ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದು,
ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ವನ್ನು ತೋರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಯಾವೆಲ್ಲಾ ದಾಖಲೆ ತೋರಿಸಬೇಕು?
ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಿಬ್ಬಂದಿಗೆ ತೋರಿಸಲು ಬೆಸ್ಕಾಂ ವಿನಂತಿಸಿಕೊಂಡಿದೆ. ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರವನ್ನು ತೋರಿಸಲು ಕೋರಿದೆ.
ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ.
ಗೃಹ ಬಳಕೆದಾರರಿಗೆ ಮಾತ್ರ ಅನ್ವಯ
ರಾಜ್ಯದ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು ಗೃಹಜ್ಯೋತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಉದ್ದೇಶದ ಮಳಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಜತೆಗೆ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯ ಲಾಭ ಪಡೆಯಬಹುದು. ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ಮೀಟರ್‌ಗೆ ಮಾತ್ರ ರಿಯಾಯಿತಿ ಸಿಗುತ್ತದೆ.