Headlines

ಜೂನ್​ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಸುಗ್ಗಿ; 25 ಲಕ್ಷಕ್ಕೂ ಅಧಿಕ ವಾಹನಗಳ ದಾಖಲೆ ಮಾರಾಟ – Kannada News | Automobile sales in India see big rise on June 2026, as EV registrations at record high

ಕಾರುಗಳ ಸಾಂದರ್ಭಿಕ ಚಿತ್ರImage Credit source: AP

ನವದೆಹಲಿ, ಜುಲೈ 6: ಭಾರತದ ಆಟೋಮೊಬೈಲ್ ಕ್ಷೇತ್ರ ಜೂನ್ 2026 ರಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ದೇಶದ ಆಟೋ ರಿಟೇಲ್ ಇತಿಹಾಸದಲ್ಲೇ ಇದು ಅತ್ಯಂತ ಯಶಸ್ವಿ ಜೂನ್ ತಿಂಗಳಾಗಿದ್ದು, ಒಟ್ಟಾರೆ ವಾಹನಗಳ ನೋಂದಣಿ (Registrations) ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 21.83 ರಷ್ಟು ದಾಖಲೆಯ ಪ್ರಗತಿ ಕಂಡಿದೆ. ಗ್ರಾಹಕರು ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ (EV), ಸಿಎನ್‌ಜಿ (CNG) ಮತ್ತು ಹೈಬ್ರಿಡ್ ವಾಹನಗಳತ್ತ ಭಾರಿ ಪ್ರಮಾಣದಲ್ಲಿ ಆಕರ್ಷಿತರಾಗುತ್ತಿರುವುದು ಈ ಮಾರಾಟದ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ.

FADA ವರದಿಯ ಪ್ರಕಾರ, ಜೂನ್ 2026 ರಲ್ಲಿ ದೇಶಾದ್ಯಂತ ಒಟ್ಟು 25,57,234 (25.57 ಲಕ್ಷ) ವಾಹನಗಳು ಮಾರಾಟವಾಗಿವೆ. ದ್ವಿಚಕ್ರ, ತ್ರಿಚಕ್ರ, ವಾಣಿಜ್ಯ (Commercial) ಮತ್ತು ಪ್ರಯಾಣಿಕರ ಕಾರುಗಳ (Passenger Vehicles) ವಿಭಾಗಗಳು ತಮ್ಮ ಸಾರ್ವಕಾಲಿಕ ಗರಿಷ್ಠ ಜೂನ್ ತಿಂಗಳ ಮಾರಾಟವನ್ನು ದಾಖಲಿಸಿವೆ.

ಪ್ಯಾಸೆಂಜರ್ ಕಾರುಗಳ ವಿಭಾಗದಲ್ಲಿ ದಾಖಲೆಯ ಮುನ್ನಡೆ

ಪ್ರಯಾಣಿಕರ ಕಾರುಗಳ ವಿಭಾಗವು ವಾರ್ಷಿಕವಾಗಿ ಶೇ. 28.63 ರಷ್ಟು ಭರ್ಜರಿ ಬೆಳವಣಿಗೆ ಕಂಡಿದ್ದು, ಒಟ್ಟು 4,10,853 ಕಾರುಗಳು ನೋಂದಣಿಯಾಗಿವೆ. ಇಂಧನ ಬೆಲೆಗಳ ಏರಿಕೆಯ ಪರಿಣಾಮವಾಗಿ ಪರ್ಯಾಯ ಇಂಧನ (Alternative Fuels) ಕಾರುಗಳ ಮಾರುಕಟ್ಟೆ ಪಾಲು ಮೊದಲ ಬಾರಿಗೆ ಶೇ. 40 ರ ಗಡಿಯನ್ನು ದಾಟಿದೆ.

ಇದನ್ನೂ ಓದಿ: ಪಿಎಂ ಕೃಷಿ ಸಿಂಚಯಿ ಯೋಜನೆ: ನೀರಾವರಿ ಸಿಸ್ಟಮ್ಸ್ ಅಳವಡಿಸಲು ಭರ್ಜರಿ ರಿಯಾಯಿತಿ; ಇಲ್ಲಿದೆ ಸಬ್ಸಿಡಿ ಮತ್ತಿತರ ಸೌಲಭ್ಯಗಳ ವಿವರ

  • ಪರ್ಯಾಯ ಇಂಧನದ ಪಾಲು: ಒಟ್ಟು ಕಾರು ಮಾರಾಟದಲ್ಲಿ ಇವಿ, ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಪಾಲು ಶೇ. 40.35 ಕ್ಕೆ ತಲುಪಿದೆ.
  • ಇಂಧನವಾರು ವಿಂಗಡಣೆ: ಸಿಎನ್‌ಜಿ (CNG) ಕಾರುಗಳು ಶೇ. 24.33, ಹೈಬ್ರಿಡ್ ಕಾರುಗಳು ಶೇ. 8.27 ಮತ್ತು ಎಲೆಕ್ಟ್ರಿಕ್ ಕಾರುಗಳು (EV) ಶೇ. 7.75 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿವೆ. ಜೂನ್ ತಿಂಗಳೊಂದರಲ್ಲೇ ದಾಖಲೆಯ 31,823 ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿವೆ.
  • ಗ್ರಾಮೀಣ ಮಾರುಕಟ್ಟೆ: ವಿಶೇಷವೆಂದರೆ, ನಗರ ಪ್ರದೇಶಗಳಿಗಿಂತ (ಶೇ. 24.67) ಗ್ರಾಮೀಣ ಭಾಗದಲ್ಲಿ ಕಾರುಗಳ ಮಾರಾಟ ಶೇ. 35.09 ರಷ್ಟು ವೇಗವಾಗಿ ವೃದ್ಧಿಸಿದೆ.

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮಾರುಕಟ್ಟೆ

  • ದ್ವಿಚಕ್ರ ವಾಹನಗಳು (Two-Wheelers): ಜೂನ್‌ನಲ್ಲಿ ಒಟ್ಟು 18,28,458 ಟೂ-ವೀಲರ್‌ಗಳು ಮಾರಾಟವಾಗಿದ್ದು, ಶೇ. 21.22 ರಷ್ಟು ವಾರ್ಷಿಕ ಪ್ರಗತಿ ಕಂಡಿದೆ. ಇದೇ ಮೊದಲ ಬಾರಿಗೆ ಇವಿ ಟೂ-ವೀಲರ್‌ಗಳ ಪಾಲು ಶೇ. 10 ರ ಗಡಿ ದಾಟಿ ಶೇ. 10.60 ಕ್ಕೆ ತಲುಪಿದೆ. ಹೀಗಿದ್ದರೂ, ಮಾನ್ಸೂನ್ ಮಳೆಯ ವಿಳಂಬದ ಕಾರಣ ಗ್ರಾಮೀಣ ಭಾಗದಲ್ಲಿ ಮೇ ತಿಂಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
  • ತ್ರಿಚಕ್ರ ವಾಹನಗಳು (Three-Wheelers): ಒಟ್ಟು 1,20,889 ಆಟೋಗಳು ಮಾರಾಟವಾಗಿದ್ದು (ಶೇ. 16.20 ಏರಿಕೆ), ಈ ವಿಭಾಗದಲ್ಲಿ ಎಲೆಕ್ಟ್ರಿಕ್ ಆಟೋಗಳ ಆರ್ಭಟ ಮುಂದುವರಿದಿದೆ. ಮಾರಾಟವಾದ ಆಟೋಗಳಲ್ಲಿ ಶೇ. 64.08 ರಷ್ಟು ಇವಿ ಆಟೋಗಳೇ ಆಗಿವೆ.

ಇದನ್ನೂ ಓದಿ: ಒಂದು ಫೋನ್​ನಿಂದ ಮತ್ತೊಂದು ಫೋನ್​ಗೆ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ಕೆಲ ವಿಧಾನಗಳು

ಕಮರ್ಷಿಯಲ್ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳು

  • ವಾಣಿಜ್ಯ ವಾಹನಗಳು (Commercial Vehicles): ಸರಕು ಸಾಗಣೆ ಮತ್ತು ಇ-ಕಾಮರ್ಸ್ ಉದ್ಯಮದ ಬೇಡಿಕೆಯಿಂದಾಗಿ ಕಮರ್ಷಿಯಲ್ ವಾಹನಗಳ ಮಾರಾಟ ಶೇ. 16.88 ರಷ್ಟು ಹೆಚ್ಚಳವಾಗಿ 90,972 ಯುನಿಟ್‌ಗಳನ್ನು ತಲುಪಿದೆ. ಇವಿ ವಾಣಿಜ್ಯ ವಾಹನಗಳ ಪಾಲು ಕೂಡ ಶೇ. 3.53 ರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ.
  • ಟ್ರ್ಯಾಕ್ಟರ್‌ಗಳು: ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಾರಾಟ ಶೇ. 25.31 ರಷ್ಟು ವೃದ್ಧಿಸಿ 1,00,818 ಯುನಿಟ್‌ಗಳಾಗಿವೆ. ಇದು ಇತಿಹಾಸದಲ್ಲೇ ಎರಡನೇ ಅತ್ಯುತ್ತಮ ಜೂನ್ ಮಾರಾಟವಾಗಿದೆ.

ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದರೂ, ಡೀಲರ್‌ಗಳ ಬಳಿ ಕಾರುಗಳ ದಾಸ್ತಾನು (Inventory) 32 ರಿಂದ 34 ದಿನಗಳಿಗೆ ಏರಿಕೆಯಾಗಿದೆ. ಮುಂಬರುವ ಹಬ್ಬದ ದಿನಗಳಲ್ಲಿ (ಗಣೇಶ ಚತುರ್ಥಿ, ಓಣಂ) ಮತ್ತಷ್ಟು ಪ್ರಗತಿಯನ್ನು ಉದ್ಯಮ ನಿರೀಕ್ಷಿಸುತ್ತಿದ್ದು, ಶೇ. 66 ಕ್ಕೂ ಹೆಚ್ಚು ಡೀಲರ್‌ಗಳು ಮುಂದಿನ ಮೂರು ತಿಂಗಳುಗಳಲ್ಲಿ ಸಕಾರಾತ್ಮಕ ಬೆಳವಣಿಗೆಯ ಭರವಸೆ ಹೊಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *