ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತ್ತು. ಈಗ ಅದರ ಮುಂದುವರಿದ ಭಾಗ ‘ಜೈಲರ್ 2’ (Jailer 2) ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯಲು ಶುರು ಮಾಡಿದೆ. ನೆಲ್ಸನ್ ದಿಲೀಪ್ ಕುಮಾರ್ ಮತ್ತು ರಜನಿಕಾಂತ್ (Rajinikanth) ಕಾಂಬಿನೇಷನ್‌ನ ಈ ಸಿನಿಮಾ ಬಿಗ್ ಬಜೆಟ್ನಲ್ಲಿ ತಯಾರಾಗುತ್ತಿದೆ. ಚಿತ್ರಮಂದಿರಕ್ಕೆ ಬರುವ ಮೊದಲೇ ಈ ಸಿನಿಮಾ ಡಿಜಿಟಲ್ ಲೋಕದಲ್ಲಿ ಇತಿಹಾಸ ನಿರ್ಮಿಸಿದೆ.
ವರದಿಗಳ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆಯು ‘ಜೈಲರ್ 2’ ಚಿತ್ರದ ಒಟಿಟಿ ಹಕ್ಕುಗಳನ್ನು ಬರೋಬ್ಬರಿ 160 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಒಟಿಟಿ ಡೀಲ್ ಆಗಿದೆ. ಈಗಲೂ ರಜನಿಕಾಂತ್ ಅವರ ಸಿನಿಮಾಗಳಿಗೆ ಎಷ್ಟು ಬೇಡಿಕೆ ಇದೆ ಎಂಬುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ ಆಗಿವೆ.
ಈ ಹಿಂದೆ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರ ‘ಥಗ್ ಲೈಫ್’ ಸಿನಿಮಾ 150 ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಈಗ ರಜನಿ ಆ ದಾಖಲೆಯನ್ನು ಅಳಿಸಿಹಾಕಿದ್ದಾರೆ. 160 ಕೋಟಿ ರೂಪಾಯಿ ಒಟಿಟಿ ಡೀಲ್ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೂ ಸುದ್ದಿ ಜೋರಾಗಿ ಕೇಳಿಬರುತ್ತಿದೆ.
‘ಜೈಲರ್’ ಮೊದಲ ಭಾಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಎಂಟ್ರಿ ಥಿಯೇಟರ್‌ಗಳಲ್ಲಿ ಸಂಚಲನ ಮೂಡಿಸಿತ್ತು. ಸೀಕ್ವೆಲ್‌ನಲ್ಲಿಯೂ ಶಿವಣ್ಣ ಅವರ ಪಾತ್ರ ಇರಲಿದ್ದು, ಅಭಿಮಾನಿಗಳಿಗೆ ಇದು ದೊಡ್ಡ ಸಮಾಚಾರ. ಚಿತ್ರದ ತಾರಾಗಣದಲ್ಲಿ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರಿದ್ದಾರೆ. ಮೋಹನ್ ಲಾಲ್, ವಿಜಯ್ ಸೇತುಪತಿ, ರಮ್ಯಾ ಕೃಷ್ಣನ್, ಯೋಗಿ ಬಾಬು ಮುಂತಾದವರು ಇದ್ದಾರೆ.
ಇದನ್ನೂ ಓದಿ: ‘ಜನ ನಾಯಗನ್’ ಬಳಿಕ ‘ಜೈಲರ್ 2’ ಸಿನಿಮಾಗೆ ಲೀಕ್ ಕಾಟ; ವಿಡಿಯೋ ವೈರಲ್
ಮೊದಲ ಭಾಗದ ಯಶಸ್ಸಿನಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಪಾತ್ರ ಬಹಳ ದೊಡ್ಡದಿತ್ತು. ‘ಜೈಲರ್ 2’ ಚಿತ್ರಕ್ಕೂ ಅವರೇ ಸಂಗೀತ ನೀಡುತ್ತಿದ್ದು, ಮತ್ತೊಮ್ಮೆ ಮಾಸ್ ಮ್ಯಾಜಿಕ್ ನಿರೀಕ್ಷಿಸಲಾಗಿದೆ. ಈ ಬಾರಿ ಸಿನಿಮಾದಲ್ಲಿ ಏನೆಲ್ಲ ವಿಶೇಷತೆ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.