ಇಸ್ಲಮಾಬಾದ್, ಆಗಸ್ಟ್ 12: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಇಮ್ರಾನ್ ಖಾನ್ (Imran Khan) ಜೈಲಿನಲ್ಲೇ ನಿಧನರಾಗಿದ್ದಾರೆ ಎಂಬ ವರದಿಗಳನ್ನು ಪಾಕಿಸ್ತಾನ ಮಿಲಿಟರಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಪತ್ರಕರ್ತ ವಜಾಹತ್ ಸಯೀದ್ ಖಾನ್ ಅವರು ಈ ಹಿಂದೆ ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂದು ಪ್ರತಿಪಾದಿಸಿದ್ದು, ಬಳಿಕ ತಮ್ಮ ಮೂಲಗಳು ಈ ಸುದ್ದಿಯನ್ನು ದೃಢಪಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಪಾಕ್ ಸೇನೆಯಿಂದ ಈ ಪ್ರತಿಕ್ರಿಯೆ ಬಂದಿದೆ.
ಇಮ್ರಾನ್ ಖಾನ್ ಬಗ್ಗೆ ಪಾಕಿಸ್ತಾನ ಸೇನೆಯ ಪ್ರತಿಕ್ರಿಯೆ:
ಪಾಕಿಸ್ತಾನಿ ಮಿಲಿಟರಿಯ ಮಾಧ್ಯಮ ವಿಭಾಗವಾದ ಐಎಸ್‌ಪಿಆರ್, ಇಮ್ರಾನ್ ಖಾನ್ ಅವರ ಸಾವಿನ ಹೇಳಿಕೆಗಳನ್ನು ಸಂಪೂರ್ಣವಾಗಿ ಕಟ್ಟುಕಥೆ ಮತ್ತು ಸುಳ್ಳು ಎಂದು ತಳ್ಳಿಹಾಕಿದೆ. ಪಾಕಿಸ್ತಾನಿ ಪತ್ರಕರ್ತ ವಜಾಹತ್ ಖಾನ್ ಅವರು ಕೂಡ ಸೇನಾ ಪ್ರಧಾನ ಕಚೇರಿಯು ಇಮ್ರಾನ್ ಖಾನ್ ಅವರ ಸಾವನ್ನು ನೇರವಾಗಿ ದೃಢಪಡಿಸಿಲ್ಲ, ಆದರೆ ಮಿಲಿಟರಿಯೊಳಗೆ ಹರಡಿರುವ ಭಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು
“ಇಮ್ರಾನ್ ಖಾನ್ ನಿಧನರಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಿಲ್ಲ. ನನ್ನ ಮೂಲಗಳು ಕೂಡ ಪಾಕಿಸ್ತಾನದ ಜೈಲಿನಲ್ಲಿ ಭಯಾನಕ ಘಟನೆ ನಡೆದಿರಬಹುದು ಎಂಬ ಭಯವನ್ನು ವ್ಯಕ್ತಪಡಿಸಿವೆ. ಈ ಭಯಕ್ಕೆ ಪಾಕಿಸ್ತಾನ ಸೇನೆಯ ಈ ಸಮಯದಲ್ಲಿ ಅತಿಯಾದ ಮೌನವೇ ಕಾರಣ. ಈ ವಿಷಯದ ಬಗ್ಗೆ ಪಾಕಿಸ್ತಾನ ಕೊನೆಗೂ ಮೌನ ಮುರಿದಿದೆ” ಎಂದು ತಮ್ಮ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನಿ ಪತ್ರಕರ್ತ ಹೇಳಿದ್ದಾರೆ.
ಇದಕ್ಕೂ ಮೊದಲು ಆಗಸ್ಟ್ 11ರಂದು ಪತ್ರಕರ್ತ ವಜಾಹತ್ ಸಯೀದ್ ಖಾನ್ ಅವರು ‘ಇಮ್ರಾನ್ ಖಾನ್ ಇನ್ನೂ ಜೀವಂತವಾಗಿದ್ದಾರೆಯೇ?’ (Is Khan still with us) ಮತ್ತು ‘ಖಾನ್ ಅವರಿಗೆ ಏನಾಯಿತು?’ (What happens after Khan) ಎಂಬ ಎರಡು ಭಾಗಗಳ ವಿಡಿಯೋ ಸರಣಿಯನ್ನು ಹಂಚಿಕೊಂಡಿದ್ದರು. ಪಾಕಿಸ್ತಾನ ಸೇನೆಯ ಜನರಲ್ ಹೆಡ್‌ಕ್ವಾರ್ಟರ್ಸ್‌ನ ಹೆಸರು ಹೇಳಲಿಚ್ಛಿಸದ ಮೂಲವೊಂದು ಇಮ್ರಾನ್ ಖಾನ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾರೆ ಎಂದು ತಮಗೆ ತಿಳಿಸಿದೆ ಎಂದು ಅವರು ಪ್ರಾರಂಭದಲ್ಲಿ ಪ್ರತಿಪಾದಿಸಿದ್ದರು.
ಇದನ್ನೂ ಓದಿ: ಇಮ್ರಾನ್ ಖಾನ್ ಬದುಕಿಲ್ಲವೇ?; ಮಾಜಿ ಪ್ರಧಾನಿಯ ಕುರಿತು ಪಾಕಿಸ್ತಾನಿ ಪತ್ರಕರ್ತನ ಶಾಕಿಂಗ್ ಹೇಳಿಕೆ
ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿದೆ. ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಅವರ ಕುಟುಂಬ ಸದಸ್ಯರು ಮತ್ತು ವೈಯಕ್ತಿಕ ವೈದ್ಯರು ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದೆ. 2025ರ ನವೆಂಬರ್‌ನಲ್ಲಿ ಇಮ್ರಾನ್ ಖಾನ್ ಅವರ ಸಾವಿನ ಬಗ್ಗೆ ಇದೇ ರೀತಿಯ ವದಂತಿಗಳು ಹರಡಿತ್ತು. ನಂತರ ಅವರ ಸಹೋದರಿ ಉಜ್ಮಾ ಖಾನಮ್ ಡಿಸೆಂಬರ್ 2ರಂದು ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿ ಅವರು ಚೆನ್ನಾಗಿದ್ದಾರೆ ಎಂದು ದೃಢಪಡಿಸಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:11 pm, Wed, 12 August 26