
ಧಾರವಾಡ, ಮಾರ್ಚ್ 30: ಕೇಂದ್ರ ಕಾರಾಗೃಹದಲ್ಲಿ ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದಲೇ ಅಪ್ರಾಪ್ತ ಬಾಲಕಿಗೆ ವಿಡಿಯೋ ಕರೆ ಮಾಡಿ ನಿರಂತರ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಈ ಆರೋಪಿಯು ಬಾಲಕಿಗೆ ಬೆದರಿಕೆ ಹಾಕುತ್ತಾ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಮಾತನಾಡಲು ಒತ್ತಾಯಿಸಿದ್ದಾನೆ. ಆರೋಪಿಯು ತನ್ನ ಕೈ ಮೇಲೆ ಸಂತ್ರಸ್ತೆಯ ಹೆಸರನ್ನು ಬರೆದುಕೊಂಡು ವಿಡಿಯೋ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯು ಜೈಲುಗಳಲ್ಲಿ ಮೊಬೈಲ್ ಫೋನ್‌ಗಳ ಸುಲಭ ಲಭ್ಯತೆ ಮತ್ತು ಬಳಕೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಅಧಿಕಾರಿಗಳು ಜೈಲುಗಳಲ್ಲಿ ಮೊಬೈಲ್‌ಗಳ ಬಳಕೆಗೆ ಅವಕಾಶವಿಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ, ಈ ಪ್ರಕರಣವು ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನು ನೀಡಿದೆ. ಲವ್ ಜಿಹಾದ್ ಆರೋಪವೂ ಕೇಳಿಬಂದಿರುವ ಈ ಪ್ರಕರಣದ ಆರೋಪಿಯು ಬಾಲಕಿಗೆ ನಿರಂತರವಾಗಿ ಹಿಂಸೆ ನೀಡುತ್ತಿದ್ದು, ಆಕೆಯ ಕುಟುಂಬ ಆತಂಕಗೊಂಡಿದೆ. ಜೈಲಾಧಿಕಾರಿಗಳ ಸಹಾಯವಿಲ್ಲದೆ ಇಂತಹ ಕೃತ್ಯ ಅಸಾಧ್ಯ ಎಂದು ಕುಟುಂಬದವರು ಆರೋಪಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.