
ನವದೆಹಲಿ, ಮಾರ್ಚ್ 20: ಫುಡ್ ಡೆಲಿವರಿ ಕಂಪನಿಯಾದ ಜೊಮಾಟೊ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು (Zomato platform fee) ಏರಿಸಿದೆ. 12.50 ರೂ ಇದ್ದ ಜೊಮಾಟೊ ಪ್ಲಾಟ್ಫಾರ್ಮ್ ಫೀ ಅನ್ನು 14.90 ರೂಗೆ ಏರಿಸಲಾಗಿದೆ. ಒಬ್ಬ ಗ್ರಾಹಕ ನೀಡುವ ಪ್ರತೀ ಆರ್ಡರ್ಗೆ ಪ್ಲಾಟ್ಫಾರ್ಮ್ ಫೀ ಅನ್ವಯ ಆಗುತ್ತದೆ. ಇದರಲ್ಲಿ 2.40 ರೂ ಅಥವಾ ಶೇ. 19.2ರಷ್ಟು ಶುಲ್ಕ ಏರಿಕೆ ಆಗಿದೆ.
ಒಂದು ವರ್ಷದೊಳಗೆ ಜೊಮಾಟೊ ಎರಡನೇ ಬಾರಿ ತನ್ನ ಪ್ಲಾಟ್ಫಾರ್ಮ್ ಫೀ ಏರಿಸಿರುವುದು. 2025ರ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಈ ಪ್ಲಾಟ್ಫಾರ್ಮ್ ಫೀ ಮೇಲೆ ಜಿಎಸ್ಟಿ ಕೂಡ ಅನ್ವಯ ಆಗುತ್ತದೆ. ಎಲ್ಪಿಜಿ ಬೆಲೆ ಏರಿಕೆಯ ಬಿಸಿಯಲ್ಲಿರುವ ಗ್ರಾಹಕರಿಗೆ ಈಗ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ನಲ್ಲೂ ದರ ಏರಿಕೆಯ ಶಾಕ್ ಸಿಗಲಿದೆ.
ಇದನ್ನೂ ಓದಿ: ಆಫೀಸ್ ಕಾರ್ಡ್ ಬಳಕೆ, ಪ್ಯಾನ್ ಕಡ್ಡಾಯ, ಅಡ್ರೆಸ್ ಪ್ರೂಫ್ ಇತ್ಯಾದಿ ಗಮನಿಸಬೇಕಾದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು
ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆಗಿರುವ ಸ್ವಿಗ್ಗಿಯಲ್ಲಿ ಪ್ಲಾಟ್ಫಾರ್ಮ್ ಫೀ 14.99 ರೂ ಇದೆ. ಮೂರನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆದ ಮ್ಯಾಜಿಕ್ಪಿನ್ನ ಪ್ಲಾಟ್ಫಾರ್ಮ್ ಫೀ 14.20 ರೂ ಇದೆ. ಸ್ವಿಗ್ಗಿ ಮತ್ತು ಜೊಮಾಟೊ ಬಹುತೇಕ ಸಮಾನ ಪ್ಲಾಟ್ಫಾರ್ಮ್ ಫೀ ಹೊಂದಿವೆ. ಮ್ಯಾಜಿಕ್ಪಿನ್ ಸ್ವಲ್ಪ ಕಡಿಮೆ ಶುಲ್ಕವನ್ನು ವಿಧಿಸುತ್ತಿದೆ.
ಫುಡ್ ಡೆಲಿವರಿ ಪ್ಲಾಟ್ಫಾರ್ಮ್ಗಳು ಗ್ರಾಹಕರಿಗೆ ಯಾವೆಲ್ಲಾ ಶುಲ್ಕ ವಿಧಿಸುತ್ತವೆ?
- ಪ್ಲಾಟ್ಫಾರ್ಮ್ ಫೀ
- ಡೆಲಿವರಿ ಪಾರ್ಟ್ನರ್ ಫೀ
- ಜಿಎಸ್ಟಿ
- ರೆಸ್ಟೋರೆಂಟ್ ಪ್ಯಾಕಿಂಗ್ ಚಾರ್ಜಸ್
ಕೆಲ ಪ್ಲಾಟ್ಫಾರ್ಮ್ಗಳು ಬೇರೆ ಶುಲ್ಕ ಹಾಕಬಹುದು. ಉದಾಹರಣೆಗೆ, ಜೊಮಾಟೊ ಸಂಸ್ಥೆ ಫೀಡಿಂಗ್ ಇಂಡಿಯಾ ಸ್ಕೀಮ್ಗೆ ಡೊನೇಶನ್ ಆಗಿ ಪ್ರತೀ ಆರ್ಡರ್ಗೆ 4 ರೂ ಸಂಗ್ರಹಿಸುತ್ತದೆ. ಹಾಗೆಯೇ, ಸರ್ಜಿಂಗ್ ಪ್ರೈಸ್ ಅನ್ನೂ ವಿಧಿಸುತ್ತವೆ. ಮೇಲೆ ತಿಳಿಸಿದ ನಾಲ್ಕು ಶುಲ್ಕಗಳಲ್ಲಿ ಜಿಎಸ್ಟಿಯು ಸರ್ಕಾರಕ್ಕೆ ಹೋಗುತ್ತದೆ. ರೆಸ್ಟೋರೆಂಟ್ ಪ್ಯಾಕಿಂಗ್ ಶುಲ್ಕವು ಆಯಾ ರೆಸ್ಟೋರೆಂಟ್ಗೆ ಸಂದಾಯವಾಗುತ್ತದೆ.
ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ; ಮಾಮೂಲಿ ಪೆಟ್ರೋಲ್ ದರದಲ್ಲಿ ಇಲ್ಲ ಬದಲಾವಣೆ
ಇದರ ಜೊತೆಗೆ ಫುಡ್ ಡೆಲಿವರಿ ಆ್ಯಪ್ಗಳು ತಮ್ಮ ರೆಸ್ಟೋರೆಂಟ್ ಪಾರ್ಟ್ನರ್ಗಳಿಂದ ಕಮಿಷನ್ ಫೀಸ್ ಕೂಡ ಸಂಗ್ರಹಿಸುತ್ತವೆ. ಶೇ. 30ಕ್ಕಿಂತಲೂ ಹೆಚ್ಚಿನ ಕಮಿಷನ್ ಅನ್ನು ರೆಸ್ಟೋರೆಂಟ್ಗಳು ನೀಡುತ್ತವೆ. ರೆಸ್ಟೋರೆಂಟ್ಗೆ ಹೋಗಿ ನೀವು 250 ರೂ ಮೊತ್ತದ ತಿಂಡಿಯನ್ನು ಪ್ಯಾಕ್ ಮಾಡಿ ತರಲು ಆಗುವ ವೆಚ್ಚಕ್ಕೆ ಹೋಲಿಸಿದರೆ ಅದೇ ತಿಂಡಿಯನ್ನು ಆ್ಯಪ್ ಮೂಲಕ ತರಿಸಿಕೊಂಡರೆ 350 ರೂಗಿಂತಲೂ ಹೆಚ್ಚು ವೆಚ್ಚವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ