ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಪ್ರಚಾರ ಜೋರಾಗಿ ನಡೆಯುತ್ತಿದೆ. ಯಶ್ ಅವರು ವಿದೇಶದಲ್ಲಿ ಸಂದರ್ಶನ ನೀಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ‘ಟಾಕ್ಸಿಕ್’ (Toxic) ಚಿತ್ರದ ಟೀಸರ್ನಲ್ಲಿ ಇರುವ ಕೆಲವು ಬೋಲ್ಡ್ ದೃಶ್ಯಗಳ ಬಗ್ಗೆ ಜನರಿಂದ ವ್ಯಕ್ತವಾದ ಟೀಕೆಗಳಿಗೆ ಯಶ್ ಈಗ ಉತ್ತರ ನೀಡಿದ್ದಾರೆ. ಆ ಮೂಲಕ ಅವರು ಸಿನಿಮಾ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಅಮೆರಿಕದಲ್ಲಿ ನಡೆದ ‘ಸಿನಿಮಾಕಾನ್’ ಈವೆಂಟ್ನಲ್ಲಿ ಪಾಲ್ಗೊಂಡಿದ್ದ ಯಶ್ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಬಗ್ಗೆ ಮಾತನಾಡಿದ ಅವರು, ‘ಭಾರತದಲ್ಲಿ ಆ್ಯಕ್ಷನ್ ಸಿನಿಮಾಗಳನ್ನು ಸಾಮಾನ್ಯವಾಗಿ ಪುರುಷ ನಿರ್ದೇಶಕರೇ ನಿರ್ದೇಶಿಸುತ್ತಾರೆ ಎಂಬ ಇತಿಹಾಸವಿದೆ. ಆದರೆ, ಒಬ್ಬ ಮಹಿಳಾ ನಿರ್ದೇಶಕಿ ಗ್ಯಾಂಗ್‌ಸ್ಟರ್ ಸಿನಿಮಾವನ್ನು ತನ್ನದೇ ಆದ ಹೆಣ್ಣಿನ ದೃಷ್ಟಿಕೋನದಿಂದ ತೆರೆಯ ಮೇಲೆ ತರುತ್ತಿರುವುದು ತುಂಬಾ ಹೊಸತನದಿಂದ ಕೂಡಿದೆ’ ಎಂದಿದ್ದಾರೆ.
ಚಿತ್ರದಲ್ಲಿನ ಬೋಲ್ಡ್ ದೃಶ್ಯಗಳ ಬಗ್ಗೆ ಮಾತನಾಡಿದ ಅವರು, ‘ಗೀತು ಅವರು ಕಥೆಯನ್ನು ಬರೆಯುವ ರೀತಿ ಮತ್ತು ಅದರಲ್ಲಿ ಪ್ರಣಯ ತೋರಿಸುವ ವಿಧಾನವೇ ಬೇರೆ. ಒಬ್ಬ ಮಹಿಳೆ ಬಯಕೆ ಅಥವಾ ಭಾವನೆಗಳನ್ನು ಎಷ್ಟು ಆಳವಾಗಿ ಮತ್ತು ವಿಭಿನ್ನವಾಗಿ ತೋರಿಸಬಲ್ಲರು ಎಂಬುದು ಈ ಚಿತ್ರದ ಜರ್ನಿಯಲ್ಲಿ ನನಗೆ ಅರಿವಾಯಿತು. ಇದು ಈವರೆಗಿನ ಆ್ಯಕ್ಷನ್ ಸಿನಿಮಾಗಳಿಗಿಂತ ಬಹಳ ವಿಭಿನ್ನವಾಗಿರಲಿದೆ’ ಎಂದು ಯಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
2025ರ ಜನವರಿಯಲ್ಲಿ ಬಿಡುಗಡೆಯಾದ ಬರ್ತ್‌ಡೇ ಟೀಸರ್ನಲ್ಲಿ ಯಶ್ ಅವರು ಕ್ಯಾಸಿನೋವೊಂದಕ್ಕೆ ಎಂಟ್ರಿ ಕೊಡುವ ದೃಶ್ಯವಿತ್ತು. ಇತ್ತೀಚೆಗೆ ಬಿಡುಗಡೆಯಾದ ‘ಇಂಟ್ರಡ್ಯೂಸಿಂಗ್ ರಾಯಾ’ ವಿಡಿಯೋದಲ್ಲಿನ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ಸ್ಮಶಾನ, ಕಾರ್ ಮತ್ತು ಬಾಂಬ್ ಒಳಗೊಂಡ ಆ ದೃಶ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಷನ್ ದೂರನ್ನು ದಾಖಲಿಸಿತ್ತು.
ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್
ಮಿಶ್ರ ಪ್ರತಿಕ್ರಿಯೆ ಮತ್ತು ಸಣ್ಣಪುಟ್ಟ ವಿರೋಧಗಳ ನಡುವೆಯೂ, ‘ಟಾಕ್ಸಿಕ್’ ಚಿತ್ರವು ತನ್ನ ವಿಭಿನ್ನ ಮೇಕಿಂಗ್ ಮತ್ತು ಯಶ್ ಅವರ ಸ್ಟೈಲಿಶ್ ಲುಕ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿರುವುದಂತೂ ನಿಜ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಕಾರಣಾಂತರಗಳಿಂದ ಮುಂದೂಡಿಕೆ ಆಯಿತು. ಜೂನ್ 4ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.