
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanthara) ಮತ್ತು ಅವರ ಪತಿ ವಿಘ್ನೇಶ್ ಶಿವನ್ ಅವರು ತಮಿಳುನಾಡಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಚೆನ್ನೈನ ಪೋಯಸ್ ಗಾರ್ಡನ್ನಲ್ಲಿ ಬೃಹತ್ ಐಷಾರಾಮಿ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 31.5 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಪ್ರಾಪರ್ಟಿ ಅನಾಲಿಟಿಕ್ಸ್ ಪ್ಲಾಟ್ಫಾರ್ಮ್ ಜ್ಯಾಪ್ಕೀ (Zapkey) ಮೂಲಕ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಈ ಮನೆಯು ಚೆನ್ನೈನ ತೇನಾಂಪೇಟೆ ವ್ಯಾಪ್ತಿಯ ‘ಲೆಗಸಿ’ ಎಂಬ ಪ್ರೀಮಿಯಂ ವಸತಿ ಸಂಕೀರ್ಣದಲ್ಲಿದೆ.
ಅಪಾರ್ಟ್ಮೆಂಟ್ ಕಟ್ಟಡದ 4 ಮತ್ತು 5ನೇ ಮಹಡಿಯಲ್ಲಿ ಈ ಡ್ಯುಪ್ಲೆಕ್ಸ್ ಮನೆಯಿದ್ದು, ಸುಮಾರು 14,369 ಚದರ ಅಡಿ ವಿಸ್ತೀರ್ಣ ಹೊಂದಿದೆ. ವಿಶೇಷವೆಂದರೆ, ಈ ಆಸ್ತಿಯಲ್ಲಿ ನಯನತಾರಾ ಅವರು ಶೇಕಡ 90ರಷ್ಟು ಪಾಲನ್ನು ಹೊಂದಿದ್ದರೆ, ವಿಘ್ನೇಶ್ ಶಿವನ್ ಶೇಕಡ 10ರಷ್ಟು ಪಾಲು ಹೊಂದಿದ್ದಾರೆ. ಈ ಮನೆಗೆ ಎಂಟು ಪಾರ್ಕಿಂಗ್ ಜಾಗಗಳು ಮೀಸಲಾಗಿವೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಇದರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಈ ಹೊಸ ಖರೀದಿಯೊಂದಿಗೆ ನಯನತಾರಾ ಅವರ ಆಸ್ತಿ ಪಟ್ಟಿಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ. ಅವರು ಈಗಾಗಲೇ ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿ ತಲಾ 15 ಕೋಟಿ ರೂ. ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ. ಇದಲ್ಲದೇ ಕೇರಳದಲ್ಲಿರುವ ಅವರ ಪೂರ್ವಜರ ಮನೆ ರಾಜ್ಯದ ಅತ್ಯಂತ ಐಷಾರಾಮಿ ಮನೆಗಳಲ್ಲಿ ಒಂದು ಎನ್ನಲಾಗುತ್ತದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಚಿರಂಜೀವಿ ಮತ್ತು ವೆಂಕಟೇಶ್ ಅಭಿನಯದ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಸದ್ಯ ಅವರ ಕೈಯಲ್ಲಿ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರವಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ, ಯಶ್ ನಾಯಕನಾಗಿ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಯನತಾರಾ ಪ್ರಮುಖ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: ನಯನತಾರಾ ಜನ್ಮದಿನಕ್ಕೆ 10 ಕೋಟಿ ರೂಪಾಯಿ ಎಲೆಕ್ಟ್ರಿಕ್ ಕಾರು ಗಿಫ್ಟ್ ಕೊಟ್ಟ ವಿಘ್ನೇಶ್
ಹಲವು ವರ್ಷಗಳಿಂದ ನಯನತಾರಾ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂದಿಗೂ ಅವರ ಬೇಡಿಕೆ ಕಡಿಮೆ ಆಗಿಲ್ಲ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಅವರು ಹೆಸರು ಮಾಡಿದ್ದಾರೆ. ಜೂನ್ 4ರಂದು ‘ಟಾಕ್ಸಿಕ್’ ಬಿಡುಗಡೆ ಆಗಲಿದೆ. ಆ ಬಳಿಕ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.