ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಕೆವಿಎನ್’ ಮೂರು ಬಿಗ್ ಬಜೆಟ್ ಚಿತ್ರಗಳನ್ನು ಘೋಷಣೆ ಮಾಡಿದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಈ ಚಿತ್ರಗಳಿಗೆ ‘ಜನ ನಾಯಗನ್’, ‘ಟಾಕ್ಸಿಕ್’, ‘ಕೆಡಿ’ ಎಂದು ಟೈಟಲ್ ಕೊಡಲಾಗಿದೆ. ಜನವರಿಯಲ್ಲಿ ಒಂದು, ಮಾರ್ಚ್ ಅಲ್ಲಿ ಒಂದು ಹಾಗೂ ಏಪ್ರಿಲ್ ಅಂತ್ಯಕ್ಕೊಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿದೆ. ಒಂದಾದ ಬಳಿಕ ಒಂದು ವಿಘ್ನ ಈ ಚಿತ್ರಗಳಿಗೆ ಎದುರಾಗುತ್ತಿದೆ. ಹೀಗಾಗಿ, ಅಭಿಮಾನಿಗಳು ಕೋರಿಕೆ ಒಂದನ್ನು ಇಟ್ಟಿದ್ದಾರೆ.
ಜನವರಿ 9ರಂದು ತಮಿಳಿನ ‘ಜನ ನಾಯಗನ್’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರವೇ ಸಿಕ್ಕಿಲ್ಲ. ಡಿಸೆಂಬರ್ನಲ್ಲಿಯೇ ಚಿತ್ರ ತಂಡದವರು ಸೆನ್ಸಾರ್ ಮಂಡಳಿಗೆ ಸಿನಿಮಾ ಸಲ್ಲಿಕೆ ಮಾಡಿದ್ದರು. ಇಂದು ಏಪ್ರಿಲ್ 25. ಅಂದರೆ ಒಂದು ಸಿನಿಮಾಗೆ ಐದು ತಿಂಗಳಾದರೂ ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ಕೊಟ್ಟಿಲ್ಲ ಎಂಬುದು ದುರಂತವೇ ಸರಿ. ಈ ಸಿನಿಮಾ ಬಿಡುಗಡೆ ಇನ್ನೂ ಯಾವಾಗ ಎಂದು ಘೋಷಣೆ ಆಗಿಲ್ಲ.
‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಬೇಕಿತ್ತು. ಆದರೆ, ಇದರ ರಿಲೀಸ್ ದಿನಾಂಕ ಜೂನ್ 4ಕ್ಕೆ ಮುಂದಕ್ಕೆ ಹೋಗಿದೆ. ಇದಕ್ಕೆ ವಾರ್ ಕಾರಣವನ್ನು ತಂಡದವರು ನೀಡಿದರೂ, ಅಭಿಮಾನಿಗಳು ಸಂಪೂರ್ಣವಾಗಿ ಇದನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಇದರ ಹಿಂದೆ ಕಾಣದ ಕಾರಣ ಇರಬಹುದು ಎಂದು ಊಹಿಸಿದ್ದಾರೆ.
ಈಗ ‘ಕೆಡಿ’ ಸಿನಿಮಾ ರಿಲೀಸ್ ಆಗುತ್ತಿದೆ. ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಮೊದಲು ರಿಲೀಸ್ ಆದ ‘ಸರ್ಸೆ ಸರ್ಸೆ..’ ಹಾಡು ವಿವಾದ ಸೃಷ್ಟಿ ಮಾಡಿ ಅದನ್ನು ಯೂಟ್ಯೂಬ್ನಿಂದಲೇ ತೆಗೆಯಬೇಕಾಯಿತು. ಇತ್ತೀಚೆಗೆ ತೆರೆಗೆ ಬಂದ ಟ್ರೇಲರ್ ಕೂಡ ತೆಗೆದು, ಹೊಸ ಟ್ರೇಲರ್ ಅಪ್ಲೋಡ್ ಮಾಡಲಾಗಿದೆ.
ಇದನ್ನೂ ಓದಿ: ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ
ಈ ಬೆಳವಣಿಗೆ ಯಶ್ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಹೀಗಾಗಿ, ‘ಟಾಕ್ಸಿಕ್’ ರಿಲೀಸ್ಗೂ ಮೊದಲೇ ಒಂದು ಹೋಮ-ಹವನ ಮಾಡಿಸುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಕೆವಿಎನ್ ಅಂತಹ ದೊಡ್ಡ ಸಂಸ್ಥೆಗೆ ಹೀಗಾದರೆ ಹೇಗೆ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.