ಯಶ್ (Yash) ನಟನೆಯ ‘ಟಾಕ್ಸಿಕ್’ ಭಾರತದ ಅತಿ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಆಗಿದೆ. ಸಿನಿಮಾದ ಕೆಲ ಟೀಸರ್ ಮತ್ತು ಪಾತ್ರಗಳ ಪೋಸ್ಟರ್ಗಳು ಸಹ ಬಿಡುಗಡೆ ಆಗಿದ್ದು, ದಿನದಿಂದ ದಿನಕ್ಕೆ ಸಿನಿಮಾದ ಕ್ರೇಜ್ ಹೆಚ್ಚುತ್ತಲೇ ಸಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೆ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡನ್ನು ಬಿಡುಗಡೆ ಮಾಡಲಾಯ್ತು. ಹಾಡಿನ ಮೇಕಿಂಗ್, ಕಿಯಾರಾ ಹಾಗೂ ಯಶ್ ಅವರ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳಿಗೆ ಬಹಳ ಹಿಡಿಸಿತ್ತು. ಇದೀಗ ಸಿನಿಮಾದ ಮತ್ತೊಂದು ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ವಿಶಾಲ್ ಅಪ್ಡೇಟ್ ಹಂಚಿಕೊಂಡಿದ್ದಾರೆ.
ಸಂಗೀತ ಕಾರ್ಯಕ್ರಮವೊಂದಕ್ಕಾಗಿ ಕ್ಯಾಲಿಫೋರ್ನಿಯಾಕ್ಕೆ ತೆರಳಿರುವ ಸಂಗೀತ ನಿರ್ದೇಶಕ ವಿಶಾಲ್, ಅಲ್ಲಿಂದಲೇ ‘ಟಾಕ್ಸಿಕ್’ ಸಿನಿಮಾದ ನಾಲ್ಕನೇ ಹಾಡಿನ ಕೆಲಸದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕ್‌ಸ್ಟೇಷನ್‌ನ ಫೋಟೋವನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ‘ಟಾಕ್ಸಿಕ್ – ಪಿಬಿಎಸ್ 4’ (Toxic – PBS 4) ಎಂದು ಹೆಸರಿಸಲಾದ ಪ್ರಾಜೆಕ್ಟ್ ಫೈಲ್ ಮೇಲೆ ಕೆಲಸ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ವಿಶಾಲ್ ನೀಡಿರುವ ಅಪ್ಡೇಟ್ ನೋಡಿದ ಅಭಿಮಾನಿಗಳು, ಸಿನಿಮಾದ ಮತ್ತೊಂದು ಹಾಡು ಶೀಘ್ರವೇ ಬಿಡುಗಡೆ ಆಗುವ ನಿರೀಕ್ಷೆಯಲ್ಲಿದ್ದಾರೆ.
ಗೀತೂ ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಟೀಸರ್ ಮತ್ತು ಹಾಡುಗಳನ್ನು ಗಮನಿಸಿದರೆ ಸಿನಿಮಾನಲ್ಲಿ ಸಾಕಷ್ಟು ಹಾಟ್ ದೃಶ್ಯಗಳು ಮತ್ತು ಆಕ್ಷನ್ ದೃಶ್ಯಗಳು ಇರುವುದು ಖಾತ್ರಿ ಆಗಿದೆ. ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:‘ಕರಾವಳಿ’ ಸಿನಿಮಾ ಹಾಡಿಗೆ ಹಿರಿಯ ಗಾಯಕಿ ಬಿ ಜಯಶ್ರೀ ಧ್ವನಿ
ಸಿನಿಮಾನಲ್ಲಿ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಮತ್ತು ಅಮಿತ್ ತಿವಾರಿ ಸೇರಿದಂತೆ ಹಲವು ವಿದೇಶಿ ನಟ, ನಟಿಯರು ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರು, ತನಿಷ್ಕ್ ಬಾಗ್ಚಿ ಮತ್ತು ಫಹೀಮ್ ಅಬ್ದುಲ್ಲಾ ಅವರೂ ಸಹ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇವರುಗಳ ಜೊತೆಗೆ ವಿಶಾಲ್ ಕೆಲ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ತಬಾಹಿ’ ಹಾಡಿಗೆ ವಿಶಾಲ್ ಅವರೇ ಸಂಗೀತ ನೀಡಿದ್ದಾರೆ.
ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿದೆ. ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಅವರ ಪತಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಸಿನಿಮಾಟೊಗ್ರಫಿ ಮಾಡಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ