ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಟಿ20 ವಿಶ್ವಕಪ್ ವಿಜೇತ ತಂಡವು ಐರ್ಲೆಂಡ್ನಂತಹ ದುರ್ಬಲ ತಂಡದ ವಿರುದ್ಧ ಟಿ20 ಸರಣಿಯನ್ನು ಸೋತಿರುವುದನ್ನು ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಟೀಂ ಇಂಡಿಯಾದ ಈ ಸೋಲು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬಿದ್ ಅಲಿಗೆ ತುಂಬಾ ಸಂತೋಷವನ್ನು ತಂದಿದೆಯಂತೆ.
ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಿನ ನಂತರ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಪಾಕ್ ಮಾಜಿ ಕ್ರಿಕೆಟಿಗ ಅಬಿದ್ ಅಲಿ “ಭಾರತ ಸೋತಿರುವುದನ್ನು ನೋಡಲು ಸಂತೋಷವಾಗಿದೆ” ಎಂದು ಬರೆದುಕೊಂಡಿದ್ದಾರೆ. ಅಬಿದ್ ಅಲಿ ಅವರ ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಬಿದ್ ಅಲಿ ಪಾಕಿಸ್ತಾನ ಪರ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 49.16 ಸರಾಸರಿಯಲ್ಲಿ 1180 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ಪಾಕಿಸ್ತಾನ ಪರ ಆರು ಏಕದಿನ ಪಂದ್ಯಗಳನ್ನು ಆಡಿರುವ ಅಬಿದ್ ಅಲಿ ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 234 ರನ್ ಗಳಿಸಿದ್ದಾರೆ.
ಅಬಿದ್ ಅಲಿ ವೃತ್ತಿಪರ ಕ್ರಿಕೆಟ್ನಲ್ಲಿ ಒಟ್ಟು 37 ಶತಕಗಳನ್ನು ಬಾರಿಸಿದ್ದು, ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 11,696 ರನ್ಗಳನ್ನು ಮತ್ತು ಲಿಸ್ಟ್ ಎ ಕ್ರಿಕೆಟ್ನಲ್ಲಿ 3,874 ರನ್ಗಳನ್ನು ಕಲೆಹಾಕಿದ್ದಾರೆ. ಆದಾಗ್ಯೂ, ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಕೇವಲ ಎರಡು ವರ್ಷಗಳಲ್ಲಿ ಕೊನೆಗೊಂಡಿತು. ಅವರು 2021 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.
ಇನ್ನು ಭಾರತ ಹಾಗೂ ಐರ್ಲೆಂಡ್ ನಡುವಿನ ಸರಣಿಯ ಬಗ್ಗೆ ಹೇಳುವುದಾದರೆ.. ಟೀಂ ಇಂಡಿಯಾ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಪಂದ್ಯವನ್ನು ಸೋಲುವುದರ ಜೊತೆಗೆ ಸರಣಿಯನ್ನೂ ಸೋತಿದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಟೀಂ ಇಂಡಿಯಾದ ಸೋಲನ್ನು ಸಂಭ್ರಮಿಸುತ್ತಿರುವ ಅಬಿದ್ ಅಲಿ ಪ್ರತಿನಿಧಿಸಿದ್ದ ಪಾಕಿಸ್ತಾನ ತಂಡ ಕೂಡ 2024 ರಲ್ಲಿ ಐರ್ಲೆಂಡ್ ವಿರುದ್ಧ ಸೋಲನ್ನು ಕಂಡಿತ್ತು.




