Headlines

ಟ್ರಂಪ್‌ಗೆ ಬಿಗ್ ಶಾಕ್: ಇರಾನ್ ವಿರುದ್ಧದ ಯುದ್ಧ ನಿಲ್ಲಿಸಲು ಅಮೆರಿಕ ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರ – Kannada News | US Senate Delivers Blow to Trump: Resolution to Stop Iran War Passes

ವಾಷಿಂಗ್ಟನ್,ಜೂನ್ 24: ಇರಾನ್ ಜತೆಗಿನ ಯುದ್ಧದ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಆಡಳಿತಕ್ಕೆ ಭಾರಿ ರಾಜಕೀಯ ಹಿನ್ನಡೆಯಾಗಿದೆ. ಇರಾನ್ ವಿರುದ್ಧದ ಸಂಘರ್ಷವನ್ನು ಅಧ್ಯಕ್ಷರು ಮುಂದುವರೆಸದಂತೆ ತಡೆಯುವ ಪ್ರಮುಖ ನಿರ್ಣಯವೊಂದನ್ನು ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟ್ ಅಂಗೀಕರಿಸಿದೆ. ಟ್ರಂಪ್ ಅವರ ಪಕ್ಷವಾದ ರಿಪಬ್ಲಿಕನ್ ಪಕ್ಷವೇ ಸೆನೆಟ್​ನಲ್ಲಿ ಬಹುಮತ ಹೊಂದಿದ್ದರೂ, ಅವರದೇ ಪಕ್ಷದ ನಾಲ್ವರು ಶಾಸಕರು ಟ್ರಂಪ್ ವಿರುದ್ಧ ಮತ ಚಲಾಯಿಸಿರುವುದು ಈ ಆಘಾತಕ್ಕೆ ಕಾರಣವಾಗಿದೆ.

ಸೆನೆಟ್‌ನಲ್ಲಿ ಈ ನಿರ್ಣಯವು 50-48 ಮತಗಳ ಅಲ್ಪ ಅಂತರದಿಂದ ಅಂಗೀಕಾರಗೊಂಡಿದೆ. ಇದಕ್ಕೂ ಮುನ್ನ ಕೆಳಮನೆಯಾದ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನಲ್ಲೂ ಇದು 215-208 ಮತಗಳಿಂದ ಪಾಸ್ ಆಗಿತ್ತು.

ಟ್ರಂಪ್ ವಿರುದ್ಧ ಮತ ಹಾಕಿದ ಸ್ವಪಕ್ಷೀಯರು ಯಾರು?
ಸುಸಾನ್ ಕಾಲಿನ್ಸ್, ಲಿಸಾ ಮುರ್ಕೋವ್ಸ್ಕಿ, ಬಿಲ್ ಕ್ಯಾಸಿಡಿ ಮತ್ತು ರಾಂಡ್ ಪಾಲ್ ಎಂಬ ನಾಲ್ವರು ರಿಪಬ್ಲಿಕನ್ ಸೆನೆಟರ್‌ಗಳು ಅಧ್ಯಕ್ಷ ಟ್ರಂಪ್ ನಿಲುವಿನ ವಿರುದ್ಧವಾಗಿ ನಿರ್ಣಯದ ಪರ ಮತ ಚಲಾಯಿಸಿದರು. ಡೇವ್ ಮೆಕ್‌ಕಾರ್ಮಿಕ್ ಮತ್ತು ಮಿಚ್ ಮೆಕ್‌ಕಾನ್ನೆಲ್ ಎಂಬ ಇಬ್ಬರು ಪ್ರಮುಖ ರಿಪಬ್ಲಿಕನ್ ನಾಯಕರು ಸಭೆಗೆ ಗೈರಾಗಿದ್ದು ಬಂಡಾಯ ಬಣಕ್ಕೆ ಜಯ ತಂದುಕೊಟ್ಟಿತು.
ಆದರೆ, ವಿರೋಧ ಪಕ್ಷವಾದ ಡೆಮಾಕ್ರಾಟ್‌ನ ಜಾನ್ ಫೆಟರ್‌ಮ್ಯಾನ್ ಮಾತ್ರ ಟ್ರಂಪ್ ಆಡಳಿತವನ್ನು ಬೆಂಬಲಿಸಿ ನಿರ್ಣಯದ ವಿರುದ್ಧ ಮತ ಹಾಕಿದ್ದು ವಿಶೇಷವಾಗಿತ್ತು.

ಇದರ ಅಸಲಿ ಅರ್ಥವೇನು? ಟ್ರಂಪ್ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ?
ಈ ನಿರ್ಣಯ ಸೆನೆಟ್‌ನಲ್ಲಿ ಅಂಗೀಕಾರವಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಅಧ್ಯಕ್ಷ ಟ್ರಂಪ್‌ಗೆ ಕೇವಲ ರಾಜಕೀಯ ಮುಜುಗರ ತರಲಿದೆಯೇ ಹೊರತು ಕಾನೂನಾತ್ಮಕವಾಗಿ ಯುದ್ಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ.

ಮತ್ತಷ್ಟು ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್

ಅಮೆರಿಕದ ಸಂವಿಧಾನದ ಪ್ರಕಾರ, ಇಂತಹ ‘ಏಕಕಾಲಿಕ ನಿರ್ಣಯಗಳು’ ಅಧ್ಯಕ್ಷರ ಅಂತಿಮ ಅನುಮೋದನೆಗೆ ಹೋಗುವುದಿಲ್ಲ ಮತ್ತು ಇವುಗಳಿಗೆ ಕಡ್ಡಾಯ ಕಾನೂನಿನ ಬಲ ಇರುವುದಿಲ್ಲ. ಇದು ಕೇವಲ ಸರ್ಕಾರದ ನಿರ್ಧಾರದ ವಿರುದ್ಧ ಸಂಸತ್ತು ಹೊಂದಿರುವ ಅಸಮಾಧಾನದ ಪ್ರದರ್ಶನವಷ್ಟೇ ಆಗಿರುತ್ತದೆ.

ಅಮೆರಿಕ ಮತ್ತು ಇರಾನ್ ನಡುವೆ 3 ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದ ಯುದ್ಧವು ಈಗಾಗಲೇ ಕಳೆದ ಏಪ್ರಿಲ್ 7 ರಂದೇ ಕದನ ವಿರಾಮದೊಂದಿಗೆ ಕೊನೆಗೊಂಡಿದೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ ಮತ್ತು ಪರಮಾಣು ಕಿಡಿ
ಇತ್ತೀಚೆಗಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೂ ಇರಾನ್‌ನ ಪರಮಾಣು ಕಾರ್ಯಕ್ರಮದ ವಿವಾದ ಇನ್ನೂ ಜೀವಂತವಾಗಿದೆ. ಇರಾನ್ ತನ್ನ ಪರಮಾಣು ಕೇಂದ್ರಗಳ ತಪಾಸಣೆಗೆ ಒಪ್ಪದಿದ್ದರೆ ಮಾತುಕತೆ ನಿಲ್ಲಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಅಂತಾರಾಷ್ಟ್ರೀಯ ಪರಮಾಣು ಸಂಸ್ಥೆ (IAEA) ಪ್ರಕಾರ, ಇರಾನ್ ಬಳಿ ಬಾಂಬ್ ತಯಾರಿಸಲು ಬೇಕಾದ ಯುರೇನಿಯಂ ಇರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *