ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಡಾನ್ 3’ ಸಿನಿಮಾ ವಿವಾದ ಈಗ ಹೊಸ ಮಜಲು ತಲುಪಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಿಂದ ರಣವೀರ್ ಸಿಂಗ್ ಕೊನೆ ಕ್ಷಣದಲ್ಲಿ ಹೊರನಡೆದಿದ್ದರು. ಈ ವಿಚಾರವಾಗಿ ಸೃಷ್ಟಿಯಾಗಿದ್ದ ಗೊಂದಲ ಬಗೆಹರಿಸಲು ರಣವೀರ್ ಸಿಂಗ್ ಅವರ ತಂದೆ ಜಗ್ಜೀತ್ ಸಿಂಗ್ ಭವ್ನಾನಿ ಅವರು ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA) ಜೊತೆ ಸಭೆ ನಡೆಸಲು ಒಪ್ಪಿಕೊಂಡಿದ್ದಾರೆ.
ರಣವೀರ್ ಸಿಂಗ್ ಅವರ ವಕೀಲರು ಕೂಡ ಈ ಸಭೆಯಲ್ಲಿ ಭಾಗವಹಿಸುವುದಾಗಿ ಇಮೇಲ್ ಮೂಲಕ ತಿಳಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಅಭಯ್ ಸಿನ್ಹಾ ಖಚಿತಪಡಿಸಿದ್ದಾರೆ. ರಣವೀರ್ ಸಿಂಗ್ ಅವರ ಹೊಸ ಚಿತ್ರ ‘ಪ್ರಳಯ’ ಮುಂಬೈನಲ್ಲಿ ಸೆಟ್ಟೇರಿದ ಬೆನ್ನಲ್ಲೇ ಈ ಧನಾತ್ಮಕ ಬೆಳವಣಿಗೆ ಕಂಡುಬಂದಿದೆ. ಜೈ ಮೆಹ್ತಾ ನಿರ್ದೇಶನದ ಜೋಂಬಿ ಥ್ರಿಲ್ಲರ್ ‘ಪ್ರಳಯ’ ಚಿತ್ರಕ್ಕೆ ರಣವೀರ್ ಸಿಂಗ್ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರದಲ್ಲಿದ್ದಾರೆ.
ಈ ಹಿಂದೆ ರಣವೀರ್ ಸಿಂಗ್ ಎಕ್ಸೆಲ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಡಾನ್ 3 ಚಿತ್ರದಿಂದ ದಿಢೀರ್ ಹೊರನಡೆದಿದ್ದರು. ಯಾವುದೇ ಸ್ಪಷ್ಟ ಕಾರಣ ನೀಡದೆ ವಿದೇಶಿ ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ಈ ನಿರ್ಧಾರ ತಳೆದಿದ್ದರು. ಇದರಿಂದಾಗಿ ನಿರ್ಮಾಪಕರು ಚಲನಚಿತ್ರ ಮಂಡಳಿಗಳ ಮೆಟ್ಟಿಲೇರಿದ್ದರು. ಈ ಹಿಂದೆ ಎಫ್ಡಬ್ಲ್ಯೂಐಸಿಇ ನೀಡಿದ್ದ ಅಸಹಕಾರ ಆದೇಶವನ್ನು ನಂತರ ಹಿಂಪಡೆಯಲಾಗಿತ್ತು.
ಇದನ್ನೂ ಓದಿ: ‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ
ಈ ಎಲ್ಲಾ ವಿವಾದಗಳ ನಡುವೆಯೂ ರಣವೀರ್ ಸಿಂಗ್ ಯಾವುದೇ ಮೌಖಿಕ ಪ್ರತಿಕ್ರಿಯೆ ನೀಡಿಲ್ಲ. ತಾವು ಮಾತುಗಳಿಗಿಂತ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರ ತಂಡ ತಿಳಿಸಿದೆ. ಪ್ರಸ್ತುತ ನಿರ್ಮಾಪಕರ ಸಂಘದ ಜೊತೆ ಸಭೆ ನಡೆಯಲಿದ್ದು ವಿವಾದಕ್ಕೆ ಸುಖಾಂತ್ಯ ಸಿಗುವ ನಿರೀಕ್ಷೆಯಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.