ಡಾ. ಕೆ.ರಾಮಚಂದ್ರ ರಾವ್
ಬೆಂಗಳೂರು, (ಮೇ 6): ಮಹಿಳೆಯರೊಂದಿಗಿನ ವೀಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್ (dr ramachandra rao )ಅವರನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮರು ನೇಮಕ ಮಾಡಲಾಗಿದೆ. ಅಲ್ಲದೇ ಅವರಿಗಾಗಿಯೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿದೆ. ಆಲ್ ಇಂಡಿಯಾ ಸರ್ವಿಸ್ ನಿಯಮಗಳ ಅಡಿ ಈಗ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಕಚೇರಿಯಲ್ಲಿ ಮಹಿಳೆಯರೊಂದಿಗೆ ಕೆ.ರಾಮಚಂದ್ರ ರಾವ್ ಅನುಚಿತ ವರ್ತನೆ ಕುರಿತ ವೈರಲ್ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿತ್ತು. ದೃಶ್ಯಗಳು ಎಡಿಟ್ ಆಗಿಲ್ಲ. ಅವು ಡೀಪ್ಫೇಕ್ ಮತ್ತು AI ನಿರ್ಮಿತ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೂ ಸಹ ಅಮಾನತು ಹಿಂಪಡೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
- ಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ವಿಡಿಯೋ ಪ್ರಕರಣ
- ಡಾ.ಕೆ.ರಾಮಚಂದ್ರ ರಾವ್ ಅಮಾನತು ಆದೇಶ ವಾಪಸ್
- ಅಮಾನತು ಆದೇಶ ಹಿಂಪಡೆದು ತಕ್ಷಣದಿಂದಲೇ ಕೆ.ರಾಮಚಂದ್ರ ರಾವ್ ಸೇವೆಗೆ ನಿಯೋಜನೆ
- ರಾಮಚಂದ್ರ ರಾವ್ ಗೆ ಡಿಜಿಪಿ (ಪೊಲೀಸ್ ಮಾನ್ಯುಯಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿ ನಿಯೋಜಿಸಿದ ಸರ್ಕಾರ
ವಿಡಿಯೋ ವೈರಲ್ ಬೆನ್ನಲ್ಲೇ ಸಸ್ಪೆಂಡ್ ಆಗಿದ್ದ ರಾಮಚಂದ್ರ ರಾವ್
ಡಾ. ಕೆ.ರಾಮಚಂದ್ರ ರಾವ್ ಅವರು ಪೊಲೀಸ್ ಸಮವಸ್ತ್ರ ಧರಿಸಿ, ತಮ್ಮ ಕಚೇರಿಯಲ್ಲೇ ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸರ್ಕಾರಿ ಕಚೇರಿಯಲ್ಲಿ, ಉನ್ನತ ದರ್ಜೆಯ ಅಧಿಕಾರಿಯೊಬ್ಬರು ಇಂತಹ ಕೃತ್ಯವೆಸಗಿರುವುದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಅಲ್ಲದೇ ಇಲಾಖೆಗೆ ಮುಜುಗರವನ್ನುಂಟು ಮಾಡಿತ್ತು. ಇದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಜನವರಿ 19ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿತ್ತು. ಬಳಿಕ ರಾಮಚಂದ್ರ ರಾವ್ ಅವರ ವಿರುದ್ಧ ಇಲಾಖಾ ತನಿಖೆಯನ್ನ ಪ್ರಾರಂಭಿಸಲಾಗಿತ್ತು.
ಇದನ್ನೂ ಓದಿ: ರಾಮಚಂದ್ರ ರಾವ್ ಕೇಸ್: ವೈರಲ್ ಆಗಿರುವ ವಿಡಿಯೋ ಅಸಲಿ ಎಂದ ತನಿಖಾ ತಂಡ
ವಿಡಿಯೋ ಬಗ್ಗೆ ರಾಮಚಂದ್ರ ರಾವ್ ಅಂದು ಹೇಳಿದ್ದೇನು?
ಕಳೆದ ತಿಂಗಳು ಏಪ್ರಿಲ್ 27 ರಂದು ರಾಮಚಂದ್ರರಾವ್ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಇದೇ ವೇಳೆ ಅಶ್ಲೀಲ ವಿಡಿಯೋ ಕೇಸ್ನಲ್ಲಿ ಸಿಲುಕಿರುವ ರಾಮಚಂದ್ರ ರಾವ್ ಅವರು ವಿಡಿಯೋ ವೈರಲ್ ಆದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದರು. ನನ್ನ ಸಸ್ಪೆನ್ಶನ್ ಬಗ್ಗೆ ಮಾತಾಡಿದ್ದೇನೆ. ತನಿಖೆ ನಡೆಯುತ್ತಿದೆ ಅದರ ಬಗ್ಗೆ ಮಾತಾಡಲ್ಲ, ನನ್ನ ಮೇಲೆ ಯಾವುದೂ ಕೇಸ್ ಇಲ್ಲ, ಈಗಲೇ ಸಾಕಷ್ಟು ಸಫರ್ ಆಗಿದ್ದೇನೆ ಬೇಡ ಪ್ಲೀಸ್ ಎಂದಿದ್ದರು.
ವಿಡಿಯೋಗಳು ವೈರಲ್ ಆಗಿ ಪ್ರಕರಣ ಗಂಭೀರವಾಗಿದ್ದರೂ ಸಹ ರಾಜ್ಯ ಸರ್ಕಾರ ಇದೀಗ ಏಕಾಏಕಿ ಅವರ ಅಮಾನತು ಆದೇಶವನ್ನು ವಾಪಸ್ ಪಡೆದುಕೊಂಡಿದ್ದು ಅಚ್ಚರಿಕೆ ಕಾರಣವಾಗಿದೆ. ಅಲ್ಲದೇ ಸರ್ಕಾರದ ಈ ನಡೆದ ಚರ್ಚೆಗೆ ಗ್ರಾಸವಾಗಿದೆ.