ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿಯ ಬಲೆಗೆ ಬಿದ್ದು ಕೋಟ್ಯಾಂತರ ರೂ. ಕಳೆದುಕೊಂಡ ಟೆಕ್ಕಿ!

ಬೆಂಗಳೂರು, ಮೇ 28: ಆಧುನಿಕ ಜಗತ್ತಿನಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿವೆ. ಸದ್ಯ ನಗರದಲ್ಲಿ ಡೇಟಿಂಗ್ ಆ್ಯಪ್ (Dating App) ಮೂಲಕ ಸುಂದರಿಯೊಬ್ಬಳ ಬಣ್ಣದ ಮಾತಿಗೆ ಮರುಳಾದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಬರೊಬ್ಬರಿ 1.66 ಕೋಟಿ ರೂಪಾಯಿ ಕಳೆದುಕೊಂಡು ವಂಚನೆಗೊಳಗಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮುಖ್ಯಾಂಶಗಳು

  • ಡೇಟಿಂಗ್ ಆ್ಯಪ್ ಸುಂದರಿ ನಂಬಿ ಬೆಂಗಳೂರು ಟೆಕ್ಕಿ ಕೋಟ್ಯಂತರ ಹಣ ಕಳೆದುಕೊಂಡಿದ್ದಾರೆ.
  • ಮದುವೆಯಾಗುವುದಾಗಿ ನಂಬಿಸಿ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಭಾರಿ ವಂಚನೆ ಎಸಗಲಾಗಿದೆ.
  • ಮೂರು ತಿಂಗಳಲ್ಲಿ ಟೆಕ್ಕಿಯಿಂದ 1.66 ಕೋಟಿ ರೂಪಾಯಿ ಪೀಕಿದ ವಂಚಕಿ.

ಮದುವೆಯ ಆಸೆ ತೋರಿಸಿ ನಂಬಿಕೆ ದ್ರೋಹ

ಬೆಂಗಳೂರಿನ ಸೌರವ್ ದುಬೆ ಎಂಬ ಟೆಕ್ಕಿಗೆ ಕಳೆದ ಫೆಬ್ರವರಿ 15ರಂದು ‘ಟಂಟನ್’ (Tantan) ಎಂಬ ಪ್ರಸಿದ್ಧ ಡೇಟಿಂಗ್ ಆ್ಯಪ್‌ನಲ್ಲಿ ರಿಯಾ ಅಗರ್ವಾಲ್ ಎಂಬ ಯುವತಿಯ ಪರಿಚಯವಾಗಿತ್ತು. ಆರಂಭದಲ್ಲಿ ಚಾಟಿಂಗ್ ಮೂಲಕ ಶುರುವಾದ ಇವರ ಪರಿಚಯ, ದಿನಕಳೆದಂತೆ ಆತ್ಮೀಯ ಸ್ನೇಹಕ್ಕೆ ತಿರುಗಿತ್ತು. ನಂತರ ಯುವತಿಯೇ ಸೌರವ್ ಮೊಬೈಲ್ ನಂಬರ್ ಪಡೆದುಕೊಂಡು ನಿರಂತರವಾಗಿ ಆಡಿಯೋ ಮತ್ತು ವಿಡಿಯೋ ಕಾಲ್ ಮಾಡುವ ಮೂಲಕ ಅವರ ಸಂಪೂರ್ಣ ವಿಶ್ವಾಸವನ್ನು ಗಳಿಸಿದ್ದಳು. ಅಷ್ಟೇ ಅಲ್ಲದೆ, ತಾನು ಸೌರವ್‌ನನ್ನು ಮದುವೆಯಾಗುವುದಾಗಿ ನಂಬಿಸಿದ್ದಳು.

ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಭಾರಿ ವಂಚನೆ

ಸೌರವ್ ತನ್ನನ್ನು ಸಂಪೂರ್ಣವಾಗಿ ನಂಬಿದ್ದಾನೆ ಎಂದು ಖಚಿತಪಡಿಸಿಕೊಂಡ ರಿಯಾ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದು ಎಂಬ ಆಮಿಷ ಒಡ್ಡಿದ್ದಾಳೆ. ಮದುವೆಯಾಗಲಿರುವ ಯುವತಿಯ ಮಾತನ್ನು ನಿಜವೆಂದು ನಂಬಿದ ಟೆಕ್ಕಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಬರೊಬ್ಬರಿ 1.66 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

ಮೊಬೈಲ್ ಸ್ವಿಚ್ ಆಫ್!

ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ ನಂತರ ಸೌರವ್‌ಗೆ ವಾಪಸ್ ಸಿಕ್ಕಿದ್ದು ಕೇವಲ 4,250 ರೂಪಾಯಿ ಮಾತ್ರ. ಇದರಿಂದ ಅನುಮಾನಗೊಂಡ ಸೌರವ್ ತನಗೆ ಬರಬೇಕಾದ ಲಾಭದ ಹಣ ಮತ್ತು ಅಸಲನ್ನು ವಾಪಸ್ ನೀಡುವಂತೆ ರಿಯಾ ಬಳಿ ಕೇಳಿದ್ದ. ಯಾವಾಗ ಸೌರವ್ ಹಣಕ್ಕಾಗಿ ಒತ್ತಾಯಿಸಲು ಆರಂಭಿಸಿದನೋ, ತಕ್ಷಣವೇ ಆಕೆ ತನ್ನ ಮೊಬೈಲ್ ನಂಬರ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ತಾನು ಸಂಪೂರ್ಣವಾಗಿ ಮೋಸ ಹೋಗಿರುವುದು ತಡವಾಗಿ ಅರಿವಿಗೆ ಬರುತ್ತಿದ್ದಂತೆ ಸೌರವ್​ಗೆ ದಿಕ್ಕು ತೋಚದಂತಾಗಿದೆ.

ಇದನ್ನೂ ಓದಿ ದೆಹಲಿಯಲ್ಲಿ ನಕಲಿ ಕೆವೈಸಿ ಮೂಲಕ ಚಹಾ ವ್ಯಾಪಾರಿಗೆ 90,000 ರೂ. ವಂಚನೆ; ಮೂವರ ಬಂಧನ

ಕೊನೆಗೆ ಸಂತ್ರಸ್ತ ಟೆಕ್ಕಿ ಸೌರವ್ ದುಬೆ ಬೆಂಗಳೂರಿನ ಅಗ್ನೇಯ ವಿಭಾಗದ ಸೆನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕ ಯುವತಿ ಹಾಗೂ ಆಕೆಯ ಬ್ಯಾಂಕ್ ಖಾತೆಗಳ ಜಾಡು ಹಿಡಿದು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಡೇಟಿಂಗ್ ಆ್ಯಪ್‌ಗಳಲ್ಲಿ ಅಪರಿಚಿತರ ಪ್ರಲೋಭನೆಗೆ ಒಳಗಾಗಬೇಡಿ ಎಂದು ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *