ನಟ ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಶೂಟಿಂಗ್ ವೇಳೆ ಭುಜಕ್ಕೆ ಗಾಯವಾಗಿದ್ದು (Shoulder Injury), ವೈದ್ಯರು ಅವರಿಗೆ 6ರಿಂದ 8 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಆ್ಯಕ್ಷನ್-ಕಟ್ ಹೇಳುತ್ತಿರುವ ಬಹುನಿರೀಕ್ಷಿತ ‘ಡ್ರ್ಯಾಗನ್’ (Dragon) ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜೂ. ಎನ್ಟಿಆರ್ ಅವರಿಗೆ ಗಾಯ ಆಗಿದೆ ಎಂಬ ವಿಷಯ ತಿಳಿದು ಅಭಿಮಾನಿಗಳಿಗೆ ಗಾಬರಿ ಆಗಿತ್ತು. ಆದರೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅವರ ಟೀಮ್ ಹೇಳಿದೆ.
ಜೂನಿಯರ್ ಎನ್ಟಿಆರ್ ಹೆಲ್ತ್ ಅಪ್ಡೇಟ್:
ಸಂಜೆಯ ವೇಳೆಗೆ ನಡೆದ ಈ ಅಪಘಾತದ ನಂತರ ಜೂನಿಯರ್ ಎನ್ಟಿಆರ್ ಅವರನ್ನು ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಡಾ. ಜೆ. ಮಧುಸೂದನ್ ರಾವ್ ಹಾಗೂ ಡಾ. ಆರ್.ಎ. ಪೂರ್ಣಚಂದ್ರ ತೇಜಸ್ವಿ ಅವರನ್ನೊಳಗೊಂಡ ವೈದ್ಯರ ತಂಡವು ನಟನಿಗೆ ಸಂಪೂರ್ಣ ತಪಾಸಣೆ ನಡೆಸಿದ್ದು, ಬೇಗನೆ ಗುಣಮುಖರಾಗಲು ಕನಿಷ್ಠ 6ರಿಂದ 8 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದೆ.
We regret to inform everyone that Mr. NTR ( @tarak9999 ) sustained an unfortunate shoulder injury earlier this evening.
Following a thorough medical evaluation, the team of doctors headed by Dr. J. Madhusudan Rao and Dr. R. A. Purnachandra Tejaswi has advised complete rest for… pic.twitter.com/AlusvIHGIx
— …. (@ynakg2) July 27, 2026
ಅಭಿಮಾನಿಗಳಿಗೆ ಧೈರ್ಯ ಹೇಳಿದ ತಂಡ:
ಜೂ. ಎನ್ಟಿಆರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡದಂತೆ ಚಿತ್ರತಂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ‘ಜೂನಿಯರ್ ಎನ್ಟಿಆರ್ ಅವರಿಗೆ ಸಂಜೆ ಶೂಟಿಂಗ್ ವೇಳೆ ಭುಜಕ್ಕೆ ಗಾಯವಾಗಿರುವುದು ವಿಷಾದನೀಯ. ವೈದ್ಯರ ತಂಡ ತಪಾಸಣೆ ನಡೆಸಿದ್ದು, ಅವರು ಸಂಪೂರ್ಣ ಗುಣಮುಖರಾಗಲು 6ರಿಂದ 8 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಆತಂಕಪಡುವ ಅಗತ್ಯವಿಲ್ಲ, ಅವರು ವೈದ್ಯರ ಸೂಕ್ತ ಉಸ್ತುವಾರಿಯಲ್ಲಿದ್ದಾರೆ’ ಎಂದು ತಿಳಿಸಲಾಗಿದೆ.
ಬಾಲಕೃಷ್ಣ ಅವರಿಗೂ ಕಾಲಿಗೆ ಗಾಯವಾಗಿತ್ತು:
ಇತ್ತೀಚೆಗಷ್ಟೇ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ಕೂಡ ತಮ್ಮ ಹೊಸ ಸಿನಿಮಾದ ಶೂಟಿಂಗ್ ವೇಳೆ ಕಾಲಿಗೆ ಗಾಯಮಾಡಿಕೊಂಡಿದ್ದರು. ಹೈದರಾಬಾದ್ನ ಎಐಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕೃಷ್ಣ ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಎನ್ಟಿಆರ್ ಕೂಡ ಕೆಲವು ವಾರಗಳ ಕಾಲ ಸಿನಿಮಾದ ಕೆಲಸಗಳಿಂದ ದೂರ ಉಳಿದು ವಿಶ್ರಾಂತಿ ಪಡೆಯಲಿದ್ದಾರೆ.
ಇದನ್ನೂ ಓದಿ: ಅಂದು ಬಾಡಿ ಶೇಮಿಂಗ್ ಎದುರಿಸಿದ್ದ ಜೂ. ಎನ್ಟಿಆರ್; ಈಗ ಕಟ್ಟುಮಸ್ತಾದ ಫೋಟೋ ವೈರಲ್
‘ಡ್ರ್ಯಾಗನ್’ ಸಿನಿಮಾ ತೆರೆಕಾಣಲು ಇನ್ನೂ ಸುಮಾರು 10 ತಿಂಗಳ ಕಾಲಾವಕಾಶ ಇರುವುದರಿಂದ, ಈ ಬ್ರೇಕ್ನಿಂದ ಸಿನಿಮಾದ ಒಟ್ಟಾರೆ ಕೆಲಸಗಳಿಗೆ ದೊಡ್ಡ ಮಟ್ಟದ ಅಡಚಣೆಯಾಗುವುದಿಲ್ಲ ಎನ್ನಲಾಗಿದೆ. ಈ ಬಿಡುವಿನ ಸಮಯದಲ್ಲಿ ಜೂ. ಎನ್ಟಿಆರ್ ಅವರು ಹೊಸ ಕಥೆಗಳನ್ನು ಕೇಳಲು ಹಾಗೂ ವಿಶ್ರಾಂತಿ ಪಡೆಯಲು ಸಮಯ ಮೀಸಲಿಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.