ತಂದೆ ಲಕ್ಷ್ಮಣ್, ಮಗಳು ನಾಗಿಣಿ, ತಾಯಿ ಮಂಜುಳಾ
ಬೆಂಗಳೂರು, (ಫೆಬ್ರವರಿ 24): ಆಕೆ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳು. ಆದ್ರೆ ಆಕೆಯ ಸಾಧನೆಗೆ ಬಡತನ ತೊಡಕಾಗಲಿಲ್ಲ. ಹಗಲಿರುಳು ಶದ್ಧೆಯಿಂದ ಓದಿ ನ್ಯಾಯಾಧೀಶೆ ಆಗುವ ಮೂಲಕ ಪೋಷಕರ ಕನಸು ನನಸು ಮಾಡಿದ್ದಾಳೆ. ಹೌದು…ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಎಂಬ ಪುಟ್ಟ ಹಳ್ಳಿಯ ಹೆಣ್ಣುಮಗಳು ನಾಗಿಣಿ ಎಲ್, ಇಂದು ಸಿವಿಲ್ ನ್ಯಾಯಾಧೀಶೆಯಾಗಿ (Judge) ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಆಟೋ ಚಾಲಕನ ಮಗಳಾಗಿ ಬೆಳೆದು, ಹೂವು ಮಾರುತ್ತಲೇ ಓದಿ, ಇಂದು ನ್ಯಾಯದ ಸೀಟಿನಲ್ಲಿ ಕುಳಿತುಕೊಳ್ಳಲು ಸಜ್ಜಾಗಿರುವುದು ಕೇವಲ ಒಂದು ಕುಟುಂಬದ ಯಶಸ್ಸಲ್ಲ, ಬದಲಿಗೆ ಹೋರಾಟದ ಹಾದಿಯಲ್ಲಿರುವ ಕೋಟ್ಯಂತರ ಯುವಜನತೆಗೆ ಮಾದರಿಯಾಗಿದ್ದಾರೆ.
ಬಡತನ ಮೆಟ್ಟಿ ನಿಂತ ನಾಗಿಣಿ
ನಾಗಿಣಿ ಅವರ ತಂದೆ ಲಕ್ಷ್ಮಣ್ ದಿನವಿಡೀ ಆಟೋ ಚಾಲನೆ ಮಾಡಿ ಬರುವ ಆದಾಯದಲ್ಲಿ ಸಂಸಾರ ನಡೆಸುತ್ತಿದ್ದರೆ, ತಾಯಿ ಮಂಜುಳಾ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದರೂ, ಮಗಳ ವಿದ್ಯಾಭ್ಯಾಸಕ್ಕೆ ಪೋಷಕರು ಎಂದೂ ಅಡ್ಡಿಯಾಗಲಿಲ್ಲ. ನಾಗಿಣಿ ಕೂಡ ಬಾಲ್ಯದಿಂದಲೇ ತಾಯಿಗೆ ಹೂವಿನ ವ್ಯಾಪಾರದಲ್ಲಿ ನೆರವಾಗುತ್ತಿದ್ದರು. ಒಂದು ಕೈಯಲ್ಲಿ ಹೂವಿನ ಮಾರು ಇರುತ್ತಿದ್ದರೆ, ಕಣ್ಣುಗಳು ಪುಸ್ತಕದ ಸಾಲುಗಳ ಮೇಲೆ ಇರುತ್ತಿದ್ದವು. 1ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿಯೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಂದೆ ಆಟೋ ಡ್ರೈವರ್, ತಾಯಿ ಹೂವಿನ ವ್ಯಾಪಾರಿ ಆದರೂ ಬಡತನವನ್ನ ಮೆಟ್ಟಿ ನಿಂತು ನಾಗಿಣಿ ಅವರು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದ ಚಿತ್ರದುರ್ಗದ ಆಟೋ ಚಾಲಕನ ಮಗಳೀಗ ನ್ಯಾಯಾಧೀಶೆ !
ತಂದೆ-ತಾಯಿ ಫುಲ್ ಖುಷ್
ಚಿಕ್ಕಂದಿನಿಂದಲೂ ಓದಿನಲ್ಲಿ ಸದಾ ಮುಂದೆ ಇದ್ದ ನಾಗಿಣಿ , ಬೆಳಗ್ಗೆ ಅಮ್ಮ ಕಟ್ಟಿ ಕೊಟ್ಟ ಹೂವನ್ನು ಮಾರಾಟ ಮಾಡಿ ಶಾಲೆಗೆ ಹೋಗುತ್ತಿದ್ದಳು. ವಕೀಲೆಯಾಗಿ ವೃತ್ತಿ ಆರಂಭಿಸಿದ ಬಳಿಕವು ಹಗಲಿರುಳು ಓದುತ್ತಿದ್ದರು. ಮಗಳು ಶ್ರಮಪಟ್ಟಿದ್ದಕ್ಕೆ ಈಗ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಖುಷಿಯಾಗಿದೆ ಎಂದು ತಾಯಿ ಮಂಜುಳಾ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಬಡತನವಿದ್ದರೂ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದು ನಿತ್ಯ ಆಟೋ ಚಾಲಕನಾಗಿ ದುಡಿಯುತ್ತಿದ್ದೇನೆ. ಅದರ ಜೊತೆ ಬೆಳಗ್ಗೆ ಮತ್ತು ಸಂಜೆ ಮಗಳನ್ನು ಶಾಲೆ ಮತ್ತು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದೆ. ನಮ್ಮ ಕಷ್ಟ ಅರಿತಿದ್ದ ಮಗಳು ಸಹ ಹಗಲಿರುಳು ಕಷ್ಟಪಟ್ಟು ಓದಿ ಇಂದು ಇಡೀ ಊರಿನ ಜನತೆ ಹೆಮ್ಮೆಪಡುವ ರೀತಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾಳೆ. ಮೊದಲಿಂದಲೂ ಚೆನ್ನಾಗಿ ಓದುತ್ತಿದ್ದಳು. ಮಗಳು ನಮ್ಮ ಶ್ರಮಕ್ಕೆ ತಕ್ಕಂತೆ ಓದಿ ನಮ್ಮ ಕನಸು ನನಸು ಮಾಡಿದ್ದಾಳೆ. ಮಗಳ ಸಾಧನೆ ನನಗೆ ಖುಷಿ ತಂದಿದೆ. ನ್ಯಾಯಾಧೀಶೆಯಾಗಿ ನೊಂದವರಿಗೆ ದನಿಯಾಗಲಿ ಎಂದು ತಂದೆ ಲಕ್ಷ್ಮಣ್ ಮಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದ್ದಾರೆ.
ಒಟ್ಟಿನಲ್ಲಿ ಇತ್ತೀಚೆಗೆ ಯುವ ಸಮೂಹ ದುಷ್ಟ ಚಟಗಳಿಗೆ ದಾಸರಾಗಿ ಕಾಲೇಜು ದಿನಗಳಲ್ಲಿಯೇ ಹಾದಿ ತಪ್ಪುತ್ತಿದ್ದಾರೆ. ಆದ್ರೆ ಚಿಕ್ಕ ವಯಸ್ಸಿನಲ್ಲಿಯೇ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ನಾಗಿಣಿ, ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ