ಜನಗಾಂವ್, ಜುಲೈ 10: ಮದ್ಯದ ಅಮಲಿನಲ್ಲಿ ಮನುಷ್ಯ ಏನೆಲ್ಲಾ ಮಾಡಲು ಸಾಧ್ಯ ಎಂಬುದಕ್ಕೆ ತೆಲಂಗಾಣದ ಜನಗಾಂವ್ ಜಿಲ್ಲೆಯಲ್ಲಿ ನಡೆದಿರುವ ಈ ವಿಲಕ್ಷಣ ಘಟನೆಯೇ ಸಾಕ್ಷಿ. ತಿರುಪತಿಗೆ ಹೋಗಲು ರೈಲು ಸಿಗಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ, ಟ್ರ್ಯಾಕ್ಟರ್ ಚಾಲಕನೊಬ್ಬ ಬಸ್ ನಿಲ್ದಾಣದಲ್ಲಿದ್ದ ಸರ್ಕಾರಿ ಆರ್ಟಿಸಿ (RTC) ಬಸ್ಸನ್ನೇ ಕದ್ದು ಬರೋಬ್ಬರಿ 21 ಕಿಲೋಮೀಟರ್ ಓಡಿಸಿಕೊಂಡು ಹೋಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಂತಿಮವಾಗಿ ಟೋಲ್ ಪ್ಲಾಜಾ ಬಳಿ ಬಸ್ ಅಪಘಾತ(Accident)ಕ್ಕೀಡಾದಾಗ ಈ ಕಳ್ಳತನ ಬಯಲಾಗಿದೆ.
ಪೊಲೀಸರ ಪ್ರಕಾರ, ಜನಗಾಂವ್ ಜಿಲ್ಲೆಯ ಚೆನ್ನೂರು ಗ್ರಾಮದ ನಿವಾಸಿ ವೆಂಕಣ್ಣ ವೃತ್ತಿಯಲ್ಲಿ ಟ್ರ್ಯಾಕ್ಟರ್ ಡ್ರೈವರ್. ಈತನಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಭಾರಿ ಆಸೆಯಿತ್ತು. ಇದಕ್ಕಾಗಿ ಎರಡು ಬಾರಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದನಾದರೂ, ತಿರುಪತಿಗೆ ಹೋಗುವ ರೈಲುಗಳು ಸಿಗದ ಕಾರಣ ರೈಲ್ವೆ ಸಿಬ್ಬಂದಿ ಈತನನ್ನು ವಾಪಸ್ ಕಳುಹಿಸಿದ್ದರು.
ರೈಲು ಸಿಗದ್ದಕ್ಕೆ ಬೇಸರಗೊಂಡ ವೆಂಕಣ್ಣ, ಸೀದಾ ಹೋಗಿ ಮದ್ಯ ಸೇವಿಸಿ ಫುಲ್ ಟೈಟ್ ಆಗಿದ್ದ. ಅದೇ ಅಮಲಿನಲ್ಲಿ ಜನಗಾಂವ್ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದಾಗ, ಅಲ್ಲಿ ಲಾಕ್ ಆಗದೆ ನಿಂತಿದ್ದ ಟಿಎಸ್ 27 ಟಿ 7231 ನಂಬರಿನ ಆರ್ಟಿಸಿ ಬಸ್ ಕಣ್ಣಿಗೆ ಬಿದ್ದಿದೆ.
ನಿಲ್ದಾಣಕ್ಕೆ ಒಂದು ರೌಂಡ್ ಹಾಕಿ ಸೂರ್ಯಪೇಟೆಗೆ ಹಾರಿದ ವೆಂಕಣ್ಣ
ಮದ್ಯದ ಅಮಲಿನಲ್ಲಿದ್ದ ವೆಂಕಣ್ಣನಿಗೆ ಸಡನ್ನಾಗಿ ತಾನೊಬ್ಬ ಡ್ರೈವರ್ ಎಂಬ ವಿಷಯ ನೆನಪಾಗಿದೆ. ಬಸ್ಸಿನ ಚಾಲಕನ ಸೀಟಿನಲ್ಲಿ ಕೂತು ನೋಡಿದಾಗ ಅಲ್ಲಿ ಕೀ ಇರಲಿಲ್ಲ, ಆದರೆ ಬಸ್ಸಿನ ಟೂಲ್ ಬಾಕ್ಸ್ ಇತ್ತು. ಟ್ರ್ಯಾಕ್ಟರ್ ಓಡಿಸಿ ಅನುಭವವಿದ್ದ ವೆಂಕಣ್ಣ, ಟೂಲ್ ಕಿಟ್ ಬಳಸಿ ಕ್ಷಣಾರ್ಧದಲ್ಲಿ ಬಸ್ ಸ್ಟಾರ್ಟ್ ಮಾಡಿಯೇ ಬಿಟ್ಟ.
ಮತ್ತಷ್ಟು ಓದಿ: ಯಮ ಸ್ವರೂಪಿಯಾದ ಬಿಎಂಟಿಸಿ ಬಸ್ಗಳು: ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ
ಬಸ್ ಸ್ಟಾರ್ಟ್ ಆಗುತ್ತಿದ್ದಂತೆ ನೇರವಾಗಿ ಹೈವೇಗೆ ಹೋಗದ ವೆಂಕಣ್ಣ, ಮೊದಲು ಯಾರಿಗೂ ಸಂಶಯ ಬಾರದಂತೆ ಜನಗಾಂವ್ ಬಸ್ ನಿಲ್ದಾಣದ ಸುತ್ತಲೂ ರಾಜಾರೋಷವಾಗಿ ಒಂದು ರೌಂಡ್ ಹೊಡೆದಿದ್ದಾನೆ. ನಂತರ ಬಸ್ಸನ್ನು ಸೀದಾ ಸೂರ್ಯಪೇಟೆ ಹೆದ್ದಾರಿಯ ಕಡೆಗೆ ಬಿಟ್ಟಿದ್ದಾನೆ. ರಾತ್ರಿಯಲ್ಲಿ ಪ್ರಯಾಣಿಕರಿಲ್ಲದ ಬಸ್ಸನ್ನು ಈತ ಬರೋಬ್ಬರಿ 21 ಕಿಲೋಮೀಟರ್ ದೂರ ನಿರಾಯಾಸವಾಗಿ ಓಡಿಸಿದ್ದಾನೆ.
ಟೋಲ್ ಗೇಟ್ನಲ್ಲಿ ‘ರಿವರ್ಸ್ ಗೇರ್’ ಆಟ, ಪೊಲೀಸರ ಎಂಟ್ರಿ
ವೆಂಕಣ್ಣನ ಈ ಸಾಹಸಯಾತ್ರೆಗೆ ಬ್ರೇಕ್ ಬಿದ್ದಿದ್ದು ಸಿಂಗರಾಜುಪಲ್ಲಿ ಟೋಲ್ ಪ್ಲಾಜಾ ಬಳಿ. ಮಧ್ಯರಾತ್ರಿ ಟೋಲ್ ಗೇಟ್ ತಲುಪಿದ ವೆಂಕಣ್ಣ, ಮದ್ಯದ ಅಮಲಿನಲ್ಲಿ ಬಸ್ಸನ್ನು ನಿಯಂತ್ರಿಸಲಾಗದೆ ಟೋಲ್ ಡಿವೈಡರ್ಗೆ ಜೋರಾಗಿ ಡಿಕ್ಕಿ ಹೊಡೆಸಿದ್ದಾನೆ. ಅಪಘಾತವಾಗುತ್ತಿದ್ದಂತೆ ಗಾಬರಿಯಾದ ಆತ, ಬಸ್ಸನ್ನು ಹೈವೇಯಲ್ಲೇ ರಿವರ್ಸ್ ಮಾಡಲು ಕಷ್ಟಪಟ್ಟಿದ್ದಾನೆ. ಮುಂದೆ-ಹಿಂದೆ ಮಾಡುತ್ತಾ ಟೋಲ್ ಸಿಬ್ಬಂದಿಗೆ ಭಾರಿ ಅನುಮಾನ ಬರುವಂತೆ ಆಟ ಆಡಿದ್ದಾನೆ.
ಅನುಮಾನಗೊಂಡು ಟೋಲ್ ಸಿಬ್ಬಂದಿ ಪ್ರಶ್ನಿಸಿದಾಗ ವೆಂಕಣ್ಣ ತಡಬಡಾಯಿಸಿ ಅಸಂಬದ್ಧ ಉತ್ತರಗಳನ್ನು ನೀಡಿದ್ದಾನೆ. ತಕ್ಷಣ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೆಂಕಣ್ಣನನ್ನು ಹಿಡಿದು ವಿಚಾರಿಸಿದಾಗ, ಆತ ಬಸ್ಸನ್ನು ಕದ್ದು ತಂದಿರುವ ವಿಷಯ ತಿಳಿದು ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ.
ಕದಿಯುವ ಉದ್ದೇಶವಿರಲಿಲ್ಲ, ಓಡಿಸುವ ಕ್ರೇಜ್ ಅಷ್ಟೇ
ಪೊಲೀಸ್ ತನಿಖೆಯಲ್ಲಿ ವೆಂಕಣ್ಣನಿಗೆ ಬಸ್ ಕದ್ದು ಮಾರಾಟ ಮಾಡುವ ಯಾವುದೇ ಕ್ರಿಮಿನಲ್ ಉದ್ದೇಶ ಇರಲಿಲ್ಲ ಎಂಬುದು ತಿಳಿದುಬಂದಿದೆ. ಮದ್ಯದ ಅಮಲಿನಲ್ಲಿ ದೊಡ್ಡ ಬಸ್ ಓಡಿಸಬೇಕೆಂಬ ಕ್ರೇಜ್ ಹಾಗೂ ತಿರುಪತಿಗೆ ಹೋಗದ ಹತಾಶೆಯಿಂದ ಆತ ಈ ಹುಚ್ಚು ಸಾಹಸಕ್ಕೆ ಕೈಹಾಕಿದ್ದ. ಅದೃಷ್ಟವಶಾತ್ ಈ 21 ಕಿಲೋಮೀಟರ್ ಜರ್ನಿಯಲ್ಲಿ ಹೈವೇಯಲ್ಲಿ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು, ವೆಂಕಣ್ಣನ ಮೇಲೆ ಕೇಸ್ ದಾಖಲಿಸಿ ಆತನನ್ನು ಜೈಲಿಗಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ