ತುಮಕೂರು, ಆ.17: ಕಳೆದ 75 ವರ್ಷಗಳಿಂದ ಲಕ್ಷಾಂತರ ರೋಗಿಗಳ ಆರೈಕೆ ಮಾಡಿ ಆಶಾಕಿರಣವಾಗಿದ್ದ ತುಮಕೂರು ಜಿಲ್ಲಾಸ್ಪತ್ರೆಗೆ ಈಗ ಹೊಸ ರೂಪ ಸಿಗಲಿದೆ. ಶೌಚಾಲಯ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಕಳೆಗುಂದಿದ್ದ ಹಳೆಯ ಆಸ್ಪತ್ರೆ ಕಟ್ಟಡವನ್ನು ತೆರವುಗೊಳಿಸಲಾಗಿದ್ದು, 131 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಜಿಲ್ಲಾಸ್ಪತ್ರೆ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದೆ.
ಜಿಲ್ಲಾ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ನಿಧಿಯ (DMF) ನೆರವಿನಿಂದ ಈ ಬೃಹತ್ ಆಸ್ಪತ್ರೆ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಸ್ವಾತಂತ್ರ್ಯಪೂರ್ವದ ಇತಿಹಾಸ ಹೊಂದಿದ್ದ ಹಳೆಯ 75 ವರ್ಷಗಳ ಪಾರಂಪರಿಕ ಕಟ್ಟಡವನ್ನು ತೆರವುಗೊಳಿಸಲಾಗುತ್ತಿದ್ದು, ಅದರ ಹಳೆಯ ಕಲ್ಲುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮರುಬಳಕೆ ಮಾಡಲು ಯೋಜಿಸಲಾಗಿದೆ.
ಹಳೆ ಕಟ್ಟಡ ತೆರವುಗೊಳಿಸಿರುವುದರಿಂದ ಸಾರ್ವಜನಿಕರ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಆಸ್ಪತ್ರೆಯ ಇತರ ವಿಭಾಗಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕಟ್ಟಡದ ವಾಸ್ತುಶಿಲ್ಪ, ರಚನಾತ್ಮಕ ವಿನ್ಯಾಸ ಹಾಗೂ ಆಧುನಿಕ ತಂತ್ರಾಂಶಗಳ ಬಗ್ಗೆ ಅಂತಿಮ ರೂಪುರೇಷೆ ಸಿದ್ಧವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ನಾಗರಪಂಚಮಿ ಹಬ್ಬದಂದೇ ಹಾವು ಕಚ್ಚಿ ಮಹಿಳೆ ದುರಂತ ಸಾವು
ಈ ಹೈಟೆಕ್ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಅಂದಾಜು 1 ವರ್ಷ 8 ತಿಂಗಳು (18 ತಿಂಗಳು) ಸಮಯ ನಿಗದಿಪಡಿಸಲಾಗಿದೆ. “ಆಸ್ಪತ್ರೆಗೆ ದಿನನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಹೀಗಾಗಿ ನೂತನ ಕಟ್ಟಡದಲ್ಲಿ ಅತ್ಯಾಧುನಿಕ ಶೌಚಾಲಯ ಹಾಗೂ ಸುಸಜ್ಜಿತ ಒಳಚರಂಡಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.” ಎಂದು ತುಮಕೂರು ಡಿಎಚ್‌ಒ ಡಾ. ಚಂದ್ರಶೇಖರ್ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ