ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣದ ಸ್ಟಾರ್ ನಟಿ. 16 ವರ್ಷಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ. ಸಮಂತಾ ಮೊದಲಿನಿಂದಲೂ ಫಿಟ್ನೆಸ್ ಒತ್ತು ನೀಡುವ ನಟಿಯಾಗಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಉಂಟಾದ ಅನಾರೋಗ್ಯದ ಬಳಿಕ ಫಿಟ್ನೆಸ್ ಅನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದ್ದು ಮಾತ್ರವೇ ಅಲ್ಲದೆ, ಫಿಟ್ನೆಸ್ ಬಗ್ಗೆ ಖುದ್ದು ಜಾಗೃತಿ ಮೂಡಿಸಲು ಆರಂಭಿಸಿದರು. ಪಾಡ್ಕಾಸ್ಟ್ಗಳ್ನು ಮಾಡಿದರು. ಬೇರೆಯವರ ಪಾಡ್ಕಾಸ್ಟ್ಗೆ ಹೋಗಿ ಫಿಟ್ನೆಸ್ನ ಅವಶ್ಯಕತೆಗಳ ಬಗ್ಗೆ ಹೇಳಿದರು. ಇದೀಗ ಸಮಂತಾ, ತಾವು ಫಿಟ್ ಆಗಿರಲು ಮತ್ತು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಮಾಡುವ ಎಂಟು ಕಾರ್ಯಗಳನ್ನು ವಿವರಿಸಿದ್ದಾರೆ. ಇದನ್ನು ಅವರು ‘ಪವರ್ ಮಾರ್ನಿಂಗ್’ ಎಂದು ಕರೆದಿದ್ದಾರೆ. ಆ ಎಂಟು ಸ್ಟೆಪ್ಸ್ ಹೀಗಿವೆ…
ಸಮಂತಾ ಪ್ರತಿದಿನ ಪಾಲಿಸುವ ಎಂಟು ಸ್ಟೆಪ್ಸ್
- ಬೆಳಿಗ್ಗೆ ಎದ್ದ ತಕ್ಷಣ ಮೊದಲ ಒಂದು ಗಂಟೆ ಕಾಲ ಮೊಬೈಲ್ ಫೋನ್, ಇಮೇಲ್ ಅಥವಾ ಸುದ್ದಿಯಿಂದ ದೂರವಿರಿ. ಇದು ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಸಮಂತಾ ಮೊಬೈಲ್ ಅನ್ನು ಕಡಿಮೆ ಬಳಸುತ್ತಾರಂತೆ.
- ಎದ್ದ ಬಳಿಕ ಕನಿಷ್ಠ ಐದು ನಿಮಿಷಗಳ ಕಾಲ ಪ್ರಶಾಂತವಾಗಿ ಕುಳಿತು ಆಳವಾಗಿ ಉಸಿರಾಡಿ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ ಮತ್ತು ದೇಹವು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.
- ಎದ್ದ 10 ನಿಮಿಷಗಳ ಒಳಗೆ ಮುಖದ ಮೇಲೆ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ. ಇದು ದೇಹದ ಜೈವಿಕ ಗಡಿಯಾರವನ್ನು (Body Clock) ಸರಿಪಡಿಸುತ್ತದೆ. ಸಮಂತಾ ಇದನ್ನು ತಪ್ಪದೇ ಮಾಡುತ್ತಾರಂತೆ.
- ಬೆಳಿಗ್ಗೆ ಉಗುರುಬೆಚ್ಚಗಿನ ನೀರಿಗೆ ಲಿಂಬೆ ರಸ, ಹಳದಿ, ಆಪಲ್ ಸೈಡರ್ ವಿನೆಗರ್ ಮತ್ತು ಸ್ವಲ್ಪ ಆಲಿವ್ ಎಣ್ಣೆಯನ್ನು ಬೆರೆಸಿ ಕುಡಿಯಿರಿ. ಇದು ದೇಹದ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುವ ಪ್ರೋಟೀನ್ ಮತ್ತು ಫೈಬರ್ ಭರಿತ ಉಪಹಾರವನ್ನು ಸೇವಿಸಿ. ಇದರಿಂದ ಜಂಕ್ ಫುಡ್ ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಜಂಕ್ ಫುಡ್ ಅನ್ನು ತಿನ್ನಲೇಬೇಡಿ ಎಂಬುದು ಸಮಂತಾರ ಮನವಿ.
- ಬೆಳಿಗ್ಗೆ 11 ಗಂಟೆಯೊಳಗೆ ಯಾವುದಾದರೊಂದು ವ್ಯಾಯಾಮ ಅಥವಾ ಕನಿಷ್ಠ ದೈಹಿಕ ಚಟುವಟಿಕೆಯನ್ನು ಮಾಡಿ. ಇದರಿಂದ ದೇಹ ಫಿಟ್ ಆಗಿರುತ್ತದೆ. ಸಮಂತಾ ದಿನದ ಎರಡು ಗಂಟೆ ಜಿಮ್ನಲ್ಲಿ ಕಳೆಯುತ್ತಾರೆ.
- ಉಪಹಾರ ಸೇವಿಸಿದ ನಂತರವೇ ಕಾಫಿ ಅಥವಾ ಟೀ ಕುಡಿಯಿರಿ. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆಯನ್ನು ತಪ್ಪಿಸಿ.
- ಅಂದು ನೀವು ಸಾಧಿಸಬೇಕಾದ ಕೆಲಸಗಳನ್ನು ಮೊದಲೇ ನಿರ್ಧರಿಸಿ ಬರೆದಿಡಿ. ಇದು ಮೆದುಳನ್ನು ಅನಗತ್ಯ ವಿಷಯಗಳತ್ತ ಹೋಗದಂತೆ ತಡೆದು ಏಕಾಗ್ರತೆ ಹೆಚ್ಚಿಸುತ್ತದೆ.
ಸಮಂತಾ ಅವರು ಈ ಹಂತಗಳನ್ನು ಕನಿಷ್ಠ 21 ದಿನಗಳ ಕಾಲ ಸತತವಾಗಿ ಪಾಲಿಸುವಂತೆ ಸಲಹೆ ನೀಡಿದ್ದಾರೆ. ಇದು ಕೇವಲ ತೂಕ ಇಳಿಕೆಗೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಮತ್ತು ಚರ್ಮದ ಕಾಂತಿಗೂ ಸಹಕಾರಿ ಎಂದು ಅವರು ತಿಳಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ