Headlines

ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ – Kannada News | Ram Charan Peddi movie transformation thanks Salman Amir Khan during Trailer Launch

ಟಾಲಿವುಡ್ ನಟ ರಾಮ್ ಚರಣ್ ಅಭಿನಯದ, ಬಹುನಿರೀಕ್ಷಿತ ‘ಪೆದ್ದಿ’ (Peddi) ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ಕ್ರೀಡಾ ಆಧಾರಿತ ಸಾಹಸ ಪ್ರಧಾನ ಚಿತ್ರಕ್ಕಾಗಿ ರಾಮ್ ಚರಣ್ (Ram Charan) ಭಾರಿ ದೈಹಿಕ ಬದಲಾವಣೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದ ಕಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಲ್ಲದೆ, ಬಾಲಿವುಡ್ ಸೂಪರ್ ಸ್ಟಾರ್‌ ನಟರಾದ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಮ್ ಚರಣ್ ಅವರಿಗೆ ಚಿತ್ರಕ್ಕಾಗಿ ಮಾಡಿಕೊಂಡ ಟ್ರಾನ್ಸ್​ಫಾರ್ಮೇಷನ್ ಕುರಿತು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸುವ ಮುನ್ನ ಬಾಲಿವುಡ್ ಸ್ಟಾರ್ ನಟರನ್ನು ಸ್ಮರಿಸಿದ ಚರಣ್, ‘ಮೊದಲನೆಯದಾಗಿ ಸಲ್ಮಾನ್ ಸರ್ ಮತ್ತು ಆಮಿರ್ ಸರ್ ಅವರಿಗೆ ಧನ್ಯವಾದಗಳು. ಅವರು ‘ಸುಲ್ತಾನ್’ ಮತ್ತು ‘ದಂಗಲ್’ ಸಿನಿಮಾಗಳ ಮೂಲಕ ಇಂತಹ ಕ್ರೀಡಾ ಆಧಾರಿತ ಚಿತ್ರಗಳಿಗೆ ದೊಡ್ಡ ಹಾದಿ ಮಾಡಿಕೊಟ್ಟಿದ್ದಾರೆ. ಆ ಸಿನಿಮಾಗಳು ನಮಗೆ ಭಾರಿ ಆತ್ಮವಿಶ್ವಾಸವನ್ನು ತುಂಬಿದವು’ ಎಂದಿದ್ದಾರೆ.

‘ಈ ರೀತಿಯ ವಿಭಿನ್ನ ಪ್ರಯೋಗದ ಸಿನಿಮಾಗಳನ್ನು ಆರಂಭಿಸಿದ್ದಕ್ಕಾಗಿ ಅವರಿಬ್ಬರಿಗೂ ಧನ್ಯವಾದಗಳು. ಅಂತಹ ಚಿತ್ರಗಳು ಹಿಂದೆ ಯಶಸ್ವಿಯಾಗಿವೆ. ಹಾಗಾಗಿ ನಾವೂ ಕೂಡ ಅದೇ ಹಾದಿಯನ್ನು ಅನುಸರಿಸಿದ್ದೇವೆ’ ಎಂದು ರಾಮ್ ಚರಣ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ‘ಪೆದ್ದಿ’ ಕೂಡ ‘ದಂಗಲ್’ ಮತ್ತು ‘ಸುಲ್ತಾನ್’ ರೀತಿಯ ಕಥೆಯನ್ನು ಹೊಂದಿದೆ ಎಂಬುದು ಗೊತ್ತಾಗಿದೆ.

‘ಪೆದ್ದಿ’ ಚಿತ್ರದ ಟ್ರೇಲರ್:

‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಕೇವಲ ಒಂದೇ ಕ್ರೀಡೆಗೆ ಸೀಮಿತವಾಗಿಲ್ಲ. ಬದಲಿಗೆ ಅವರು ಕ್ರಿಕೆಟ್, ಕುಸ್ತಿ, ಮತ್ತು ಓಟ ಸೇರಿದಂತೆ ಮೂರು ವಿಭಿನ್ನ ಕ್ರೀಡೆಗಳ ಅಖಾಡಕ್ಕಿಳಿದಿದ್ದಾರೆ. ಪ್ರತಿಯೊಂದು ಕ್ರೀಡೆಗೂ ತಕ್ಕಂತೆ ಅವರು ತಮ್ಮ ದೇಹದ ತೂಕ ಮತ್ತು ಲುಕ್ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಕೂಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

‘ಚಿತ್ರಕ್ಕಾಗಿ ದೈಹಿಕ ಬದಲಾವಣೆ ಮಾಡಿಕೊಳ್ಳುವುದು ಕಥೆಯದೇ ಒಂದು ಭಾಗವಾಗಿತ್ತು. ನಿರ್ದೇಶಕ ಬುಚ್ಚಿ ಬಾಬು ಸನಾ ನನ್ನ ಮನೆಗೆ ಬಂದು ನೆಲದ ಮೇಲೆ ಕುಳಿತು 2 ಗಂಟೆ 40 ನಿಮಿಷಗಳ ಕಾಲ ಕಥೆ ಓದಿದಾಗ ನನಗೆ ಮರುಮಾತೇ ಇರಲಿಲ್ಲ. ಈ ಸಿನಿಮಾ ಶೂಟಿಂಗ್ ದೈಹಿಕವಾಗಿ ತುಂಬಾ ದಣಿವಿನಿಂದ ಕೂಡಿರಲಿದೆ ಎಂಬುದು ನನಗೆ ಗೊತ್ತಿತ್ತು’ ಎಂದು ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ಒಬ್ಬ ವ್ಯಕ್ತಿ ಕ್ರೀಡೆಯ ಮೂಲಕ ತನ್ನ ಅಸ್ತಿತ್ವವನ್ನು ಹುಡುಕಿಕೊಳ್ಳುವ ಕಥೆ ಇದು. ನಾವೆಲ್ಲರೂ ಬದುಕಲು ಒಂದಲ್ಲ ಒಂದು ಗುರುತನ್ನು ಬಯಸುತ್ತೇವೆ. ಇಲ್ಲಿ ಪೆದ್ದಿ ಕೂಡ ತನ್ನದೇ ಆದ ಅಸ್ತಿತ್ವಕ್ಕಾಗಿ ಹೋರಾಡುತ್ತಾನೆ. ಒಂದು ದೊಡ್ಡ ಕಾರಣಕ್ಕಾಗಿ ಆತ ಹೇಗೆ ಕ್ರಾಸ್ ಓವರ್ ಅಥ್ಲೀಟ್ ಆಗಿ ಬದಲಾಗುತ್ತಾನೆ ಎಂಬುದನ್ನು ನಿರ್ದೇಶಕರು ತುಂಬಾ ಸಹಜವಾಗಿ ಹಾಗೂ ಅಷ್ಟೇ ಕಮರ್ಷಿಯಲ್ ಆಗಿ ತೆರೆಮೇಲೆ ತಂದಿದ್ದಾರೆ’ ಎಂದು ರಾಮ್ ಚರಣ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *