ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್ ಮೇಲೆ ಅಮೆರಿಕ (America) ಮತ್ತು ಇಸ್ರೇಲ್ ಜಂಟಿ ದಾಳಿ ಮಾಡುತ್ತಿವೆ. ಇರಾನ್ ಸಹ ಪ್ರತಿದಾಳಿ ಮಾಡುತ್ತಿದೆ. ಯುದ್ಧದ ಭೀತಿ ಮಧ್ಯಪ್ರಾಚ್ಯದ ಹಲವು ದೇಶಗಳನ್ನು ಆವರಿಸಿದ್ದು, ಅದರಲ್ಲಿ ಯುಎಇ ಸಹ ಒಂದಾಗಿದೆ. ಯುಎಇಯ ದುಬೈ, ಅಬುದಾಭಿ ಇನ್ನೂ ಕೆಲವು ನಗರಗಳಲ್ಲಿ ಭಾರತೀಯರು ಸಿಲುಕಿಕೊಂಡಿದ್ದು, ಭಯದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ವಿಮಾನ ಹಾರಾಟ ರದ್ದಾಗಿರುವ ಕಾರಣ ಭಾರತಕ್ಕೆ ಬರಲಾರದೆ ಒದ್ದಾಡುತ್ತಿದ್ದಾರೆ. ಇದೀಗ ದುಬೈನಲ್ಲಿ ಸಿಲುಕಿಕೊಂಡಿರುವ ನಟಿಯೊಬ್ಬರು ತಮ್ಮನ್ನು ಕಾಪಾಡುವಂತೆ ಪ್ರಧಾನಿ ಮೋದಿ ಅವರಲ್ಲಿ ಕೇಳಿಕೊಂಡಿದ್ದಾರೆ. ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ನಟಿ ಸೋನಲ್ ಚೌಹಾಣ್ ಅವರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಯಾನ ಸೇವೆಗಳು ಸ್ಥಗಿತಗೊಂಡಿರುವುದರಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ, ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಕನ್ನಡದ ‘ಶಿವಲಿಂಗ’ ಸೇರಿದಂತೆ ಹಿಂದಿ, ತೆಲುಗು ಸಿನಿಮಾಗಳಲ್ಲಿಯೂ ಸಹ ನಟಿಸಿರುವ ನಟಿ ಸೋನಲ್ ಚೌಹಾಣ್ ಅವರು ದುಬೈನಲ್ಲಿ ಸಿಲುಕಿಕೊಂಡಿದ್ದು, ಯುದ್ಧ ಭೀತಿಯಿಂದ ತತ್ತರಿಸಿದ್ದಾರೆ. ಭಾರತಕ್ಕೆ ಬರಲಾರದೆ ಚಿಂತಿತರಾಗಿರುವ ನಟಿ ಸೋನಲ್, ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದು, ತಮ್ಮನ್ನ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಸೋನಲ್ ಚೌಹಾಣ್ ಅವರು ತಮ್ಮ ಪೋಸ್ಟ್ನಲ್ಲಿ,ಪ್ರಧಾನಿ ನರೇಂದ್ರ ಮೋದಿ ಅವರೇ, ನಾನು ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಸಿಲುಕಿಕೊಂಡಿದ್ದೇನೆ. ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಭಾರತಕ್ಕೆ ಮರಳಲು ಸ್ಪಷ್ಟ ಮಾರ್ಗವಿಲ್ಲ. ನಾನು ಸುರಕ್ಷಿತವಾಗಿ ಮನೆಗೆ ಮರಳಲು ಸರ್ಕಾರದ ಮಾರ್ಗದರ್ಶನ ಮತ್ತು ಬೆಂಬಲವನ್ನು ಬಯಸುತ್ತಿದ್ದೇನೆ. ಸರ್ಕಾರದಿಂದ ಯಾವುದೇ ಸಹಾಯ ಮತ್ತು ಸುರಕ್ಷಿತ ವಾಪಸಾತಿಗೆ ಮಾರ್ಗದರ್ಶನಕ್ಕಾಗಿ ನಾನು ತುಂಬಾ ಕೃತಜ್ಞಳಾಗಿರುತ್ತೇನೆ’ ಎಂದಿರುವ ನಟಿ, ತಮ್ಮ ಟ್ವೀಟ್ ಅನ್ನು ಪ್ರಧಾನಿ ಕಚೇರಿ (PMO) ಮತ್ತು ವಿದೇಶಾಂಗ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ:‘ನಾನು ಬಾಲಿವುಡ್ ಬಿಡಲು ಬಯಸಲಿಲ್ಲ, ನನ್ನನ್ನು ಬಲವಂತಪಡಿಸಲಾಯಿತು’; ಪ್ರಿಯಾಂಕಾ ಚೋಪ್ರಾ
ಸೋನಲ್ ಚೌಹಾಣ್ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಮತ್ತು ಮಾಡೆಲ್ ಆಗಿದ್ದಾರೆ. 2008ರಲ್ಲಿ ಇಮ್ರಾನ್ ಹಶ್ಮಿ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಜನ್ನತ್’ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಈ ಚಿತ್ರದ ‘ಜರಾ ಸಾ’ ಹಾಡಿನ ಮೂಲಕ ಅವರು ಸಖತ್ ಜನಪ್ರಿಯತೆ ಗಳಿಸಿದರು. ಕೇವಲ ಹಿಂದಿ ಮಾತ್ರವೇ ಅಲ್ಲದೆ ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಶಿವ ರಾಜ್ಕುಮಾರ್ ಅವರ ಜೊತೆ ‘ಶಿವಲಿಂಗ’ ಚಿತ್ರದ ಪ್ರಮುಖ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿ ಬಾಲಕೃಷ್ಣ ಅವರ ಜೊತೆ ‘ಲೆಜೆಂಡ್’ ಮತ್ತು ‘ಡಿಕ್ಟೇಟರ್’ ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಅಭಿನಯದ ಅದ್ದೂರಿ ಚಿತ್ರ ‘ಆದಿಪುರುಷ್’ ನಲ್ಲಿ ಶೇಷನಾಗನ ಪತ್ನಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.
ಯುದ್ಧ ಭೀತಿ ಇರುವ ಕಾರಣದಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ದುಬೈ ಸೇರಿದಂತೆ ಹಲವು ಅರಬ್ ರಾಷ್ಟ್ರಗಳ ವೈಮಾನಿಕ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆಕಾಶದಲ್ಲಿ ಕ್ಷಿಪಣಿಗಳು ಸಂಚರಿಸುತ್ತಿರುವ ವಿಡಿಯೋಗಳು ಹರಿದಾಡುತ್ತಿದ್ದು, ಪ್ರವಾಸಿಗರಲ್ಲಿ ಭೀತಿ ಮೂಡಿಸಿದೆ.ಸೋನಲ್ ಅವರಂತೆ ಸಾವಿರಾರು ಭಾರತೀಯ ಪ್ರಜೆಗಳು ಅಲ್ಲಿ ಸಿಲುಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ