
ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿರುವ ತಮಿಳು ವೆಟ್ರಿ ಕಳಗಂ (TVK) ಪಕ್ಷದ ಸ್ಥಾಪಕ, ನಟ ದಳಪತಿ ವಿಜಯ್ (Thalapathy Vijay) ಅವರು ಸೋಮವಾರ (ಮಾರ್ಚ್ 30) ತಮ್ಮ ಮೊದಲ ಚುನಾವಣಾ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್ನಲ್ಲಿ ಅವರು ಘೋಷಿಸಿಕೊಂಡಿರುವ ಆಸ್ತಿಯ ಮೊತ್ತ ಕೇಳಿ ಅಭಿಮಾನಿಗಳು ಹಾಗೂ ರಾಜಕೀಯ ವಲಯ ದಂಗಾಗಿದೆ. 52 ವರ್ಷ ವಯಸ್ಸಿನ ವಿಜಯ್ ಅವರು ಸುಮಾರು 603.20 ಕೋಟಿ ರೂಪಾಯಿ ಮೌಲ್ಯದ ಒಟ್ಟು ಆಸ್ತಿಯನ್ನು (Thalapathy Vijay Net Worth) ಹೊಂದಿರುವುದಾಗಿ ತಿಳಿಸಿದ್ದಾರೆ.
ವಿಜಯ್ ಅವರ ಒಟ್ಟು ಆಸ್ತಿಯಲ್ಲಿ 404.58 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಹಾಗೂ 198.62 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದೆ. ಕೊಡೈಕೆನಾಲ್ನಲ್ಲಿ ಕೃಷಿ ಭೂಮಿ, ಚೆನ್ನೈನ ವಿವಿಧೆಡೆ ವಾಣಿಜ್ಯ ಮಳಿಗೆಗಳು ಮತ್ತು ವಸತಿ ಕಟ್ಟಡಗಳನ್ನು ಅವರು ಹೊಂದಿದ್ದಾರೆ. ಇನ್ನು, ವಿಜಯ್ ಅವರ ಪತ್ನಿ ಸಂಗೀತಾ ಅವರ ಹೆಸರಿನಲ್ಲಿ 15.76 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.
ವಿಜಯ್ ಅವರು ಐಷಾರಾಮಿ ಜೀವನಶೈಲಿಗೆ ಹೆಸರಾಗಿದ್ದು, ಅವರ ಬಳಿ ಬಿಎಂಡಬ್ಲ್ಯು 530, ಟೊಯೋಟಾ ಲೆಕ್ಸಸ್, ಟೊಯೋಟಾ ವೆಲ್ಫೈರ್ ಮತ್ತು ಬಿಎಂಡಬ್ಲ್ಯು ಐ7 ಮುಂತಾದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾರುಗಳಿವೆ. ಅವರ ಕೈಯಲ್ಲಿ 2 ಲಕ್ಷ ರೂ. ನಗದು ಹಾಗೂ ವಿವಿಧ ಬ್ಯಾಂಕ್ ಖಾತೆಗಳಲ್ಲಿ 213 ಕೋಟಿ ರೂಪಾಯಿಗೂ ಅಧಿಕ ಠೇವಣಿ ಇದೆ. 883 ಗ್ರಾಂ ಚಿನ್ನ ಮತ್ತು 15 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಅವರು ಘೋಷಿಸಿದ್ದಾರೆ.
ವಿಜಯ್ ಅವರ ಅಫಿಡವಿಟ್ನಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ ಅವರ ಸಾಲದ ವಿವರ. ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಹೊಂದಿದ್ದರೂ ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಗಳಿಗೆ ಅವರು ಒಂದು ರೂಪಾಯಿ ಕೂಡ ಸಾಲ ಬಾಕಿ ಉಳಿಸಿಕೊಂಡಿಲ್ಲ. 2024-25ರ ಆರ್ಥಿಕ ವರ್ಷದಲ್ಲಿ ಅವರು 184.53 ಕೋಟಿ ರೂಪಾಯಿ ಆದಾಯವನ್ನು ಐಟಿ ರಿಟರ್ನ್ಸ್ನಲ್ಲಿ ತೋರಿಸಿದ್ದಾರೆ.
ಇದನ್ನೂ ಓದಿ: ಇಫ್ತಾರ್ಕೂಟದಲ್ಲಿ ಭಾಗಿ ಆದ ದಳಪತಿ ವಿಜಯ್; ವಿವಾದದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ
ವಿಜಯ್ ಅವರು 1992ರಲ್ಲಿ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. 1989 ಮತ್ತು 1991ರಲ್ಲಿ 10 ಮತ್ತು 12ನೇ ತರಗತಿಯನ್ನು ಖಾಸಗಿಯಾಗಿ ಪೂರೈಸಿದ್ದಾರೆ. ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಇಲ್ಲ ಹಾಗೂ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.