ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಈಗ ವಿಶ್ವ ಕ್ರಿಕೆಟ್ನ ಅತ್ಯಂತ ದುಬಾರಿ ಆಟಗಾರನಾಗುವ ಹಾದಿಯಲ್ಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (CA) ತನ್ನ ನಾಯಕನನ್ನು ಫ್ರಾಂಚೈಸಿ ಕ್ರಿಕೆಟ್ನ ಆಕರ್ಷಣೆಯಿಂದ ಉಳಿಸಿಕೊಳ್ಳಲು ಬರೋಬ್ಬರಿ 27.43 ಕೋಟಿ (5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ವಾರ್ಷಿಕ ವೇತನದ ಬೃಹತ್ ಒಪ್ಪಂದವನ್ನು ಮುಂದಿಟ್ಟಿದೆ ಎಂದು ದಿ ಏಜ್ ವರದಿ ಮಾಡಿದೆ.
ಏನಿದು ‘ಲೈಫ್ಲೈನ್’ ಒಪ್ಪಂದ?
ಇತ್ತೀಚಿನ ದಿನಗಳಲ್ಲಿ ಐಪಿಎಲ್ನಂತಹ ಖಾಸಗಿ ಲೀಗ್ಗಳ ಮಾಲೀಕರು ಅಂತಾರಾಷ್ಟ್ರೀಯ ಆಟಗಾರರಿಗೆ ತಮ್ಮ ಫ್ರಾಂಚೈಸಿಗಳ ಪರವಾಗಿ ಮಾತ್ರ ಆಡಲು ಕೋಟಿಗಟ್ಟಲೆ ಹಣದ ಆಫರ್ ನೀಡುತ್ತಿದ್ದಾರೆ. ವರದಿಗಳ ಪ್ರಕಾರ, ಒಂದು ಐಪಿಎಲ್ ಫ್ರಾಂಚೈಸಿ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್ಗೆ ವರ್ಷಕ್ಕೆ ಸುಮಾರು ₹58 ಕೋಟಿ ನೀಡಲು ಮುಂದಾಗಿತ್ತು. ಇಂತಹ ಆಮಿಷಗಳನ್ನು ತಡೆಯಲು ಕ್ರಿಕೆಟ್ ಆಸ್ಟ್ರೇಲಿಯಾ ಈ 2029ರವರೆಗಿನ ದೀರ್ಘಾವಧಿಯ ಒಪ್ಪಂದವನ್ನು ರೂಪಿಸಿದೆ.
ಕಮಿನ್ಸ್-ಸಿಎ ಒಪ್ಪಂದದ ಮುಖ್ಯಾಂಶಗಳು:
- ವಾರ್ಷಿಕ ವೇತನ: ಸುಮಾರು ₹27.43 ಕೋಟಿ (ಒಂದು ವೇಳೆ ಅವರು ಒಪ್ಪಂದಕ್ಕೆ ಸಹಿ ಹಾಕಿದರೆ).
- ಅವಧಿ: 2026 ರಿಂದ 2029 ರವರೆಗೆ ಈ ಒಪ್ಪಂದ ಜಾರಿಯಲ್ಲಿರಲಿದೆ.
- ಉದ್ದೇಶ: ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕಾಗಿ ಆಡುವುದನ್ನು ಪ್ರಥಮ ಆದ್ಯತೆಯಾಗಿರಿಸುವುದು.
ಪ್ಯಾಟ್ ಕಮ್ಮಿನ್ಸ್ ಬೇಡಿಕೆ ಹೆಚ್ಚಲು ಕಾರಣವೇನು?
ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಕಳೆದ ಎರಡು ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಆ ಸಾಧನೆಗಳಾವುವು ಎಂದು ನೋಡುವುದಾದರೆ…
- ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಜಯ.
- ಏಕದಿನ ವಿಶ್ವಕಪ್ 2023 ವಿಜೇತ ನಾಯಕ.
- ಆ್ಯಶಸ್ ಸರಣಿ ಉಳಿಸಿಕೊಳ್ಳುವಲ್ಲಿ ಯಶಸ್ಸು.
- ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದು.
ಇದನ್ನೂ ಓದಿ: RCB ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್..!
ವಿಶ್ವ ದಾಖಲೆಯ ಒಪ್ಪಂದ:
ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ಆಟಗಾರ ವಾರ್ಷಿಕ ವೇತನವಾಗಿ ಇಷ್ಟೊಂದು ಮೊತ್ತ ಪಡೆದಿಲ್ಲ. ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ನೀಡುವ ಗರಿಷ್ಠ ವಾರ್ಷಿಕ ಒಪ್ಪಂದ 5 ಕೋಟಿ ರೂ. ಮಾತ್ರ. ಆದರೆ ಇದೀಗ ಪ್ಯಾಟ್ ಕಮಿನ್ಸ್ಗೆ ಬರೋಬ್ಬರಿ 27.43 ಕೋಟಿ ರೂ. ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.
ಐಪಿಎಲ್ ಮತ್ತು ಇತರ ಲೀಗ್ಗಳ ಗಳಿಕೆ:
ಪ್ಯಾಟ್ ಕಮ್ಮಿನ್ಸ್ ಈಗಾಗಲೇ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ₹18 ಕೋಟಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲೂ ಅವರು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದ್ದಾರೆ. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಹೊಸ ಒಪ್ಪಂದ ಮಾಡಿದರೆ, ಅವರ ವಾರ್ಷಿಕ ಆದಾಯ 50 ಕೋಟಿ ರೂ. ದಾಟಲಿದೆ.
ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ವಾರ್ಷಿಕ ಒಪ್ಪಂದದ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿ ಪ್ಯಾಟ್ ಕಮಿನ್ಸ್ ಹೊರಹೊಮ್ಮಲಿದ್ದಾರೆ.