ಇಂಗ್ಲೆಂಡ್ ತಂಡದ ಉದಯೋನ್ಮುಖ ಆಲ್ರೌಂಡರ್ ಜೇಕಬ್ ಬೆಥೆಲ್ ಬಲ ಮೊಣಕಾಲಿನ ಗಾಯದ ಕಾರಣದಿಂದಾಗಿ 2026ರ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವನ್ನು ಮುನ್ನಡೆಸಬೇಕಾಗಿದ್ದ ಬೆಥೆಲ್ ಅವರ ಅನುಪಸ್ಥಿತಿ, ಟೂರ್ನಿ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಗಾಯದ ಹಿನ್ನಲೆ:
ಭಾರತದ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ಸರಣಿಯ ವೇಳೆ ಜೇಕಬ್ ಬೆಥೆಲ್ ಗಾಯಗೊಂಡಿದ್ದರು. ಸರಣಿಯ ಅಂತಿಮ ಪಂದ್ಯದಲ್ಲಿ 91 ರನ್ ಬಾರಿಸಿ ಹಾಗೂ 1 ವಿಕೆಟ್ ಪಡೆದು ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದಿದ್ದ ಬೆಥೆಲ್, ಆ ಪಂದ್ಯದ ಬಳಿಕ ತೀವ್ರ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರು ಎಂಆರ್ಐ ಸ್ಕ್ಯಾನಿಂಗ್ಗೆ ಒಳಗಾಗಿದ್ದರು. ಎಂಆರ್ಐ ಸ್ಕ್ಯಾನಿಂಗ್ ವರದಿಯಲ್ಲಿ ಗಾಯದ ತೀವ್ರತೆ ಹೆಚ್ಚಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದೆ.
ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡಕ್ಕೆ ಹಿನ್ನಡೆ:
- ಭಾರಿ ಮೊತ್ತದ ಒಪ್ಪಂದ: ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿಯು ಜೇಕಬ್ ಬೆಥೆಲ್ ಅವರನ್ನು ಬರೋಬ್ಬರಿ £340,000 (ಸುಮಾರು 3.6 ಕೋಟಿ ರೂ.) ಭಾರಿ ಮೊತ್ತಕ್ಕೆ ತಂಡದಲ್ಲೇ ಉಳಿಸಿಕೊಂಡಿತ್ತು.
- ನಾಯಕತ್ವದ ಜವಾಬ್ದಾರಿ: ಕೇವಲ 22 ವರ್ಷದ ಬೆಥೆಲ್ ಅವರನ್ನು ಈ ಸೀಸನ್ನ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ಪಂದ್ಯಾವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಅವರು ಹೊರಬಿದ್ದಿರುವುದು ತಂಡದ ಯೋಜನೆಗಳನ್ನು ತಲೆಕೆಳಗಾಗಿಸಿದೆ.
ಹೊಸ ನಾಯಕ ಯಾರು?
ಜೇಕಬ್ ಬೆಥೆಲ್ ಅಲಭ್ಯತೆಯಿಂದಾಗಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಮ್ಯಾನೇಜ್ಮೆಂಟ್, ಸೌತ್ ಆಫ್ರಿಕಾದ ಅನುಭವಿ ಆಲ್ರೌಂಡರ್ ಡೊನೊವನ್ ಫೆರೇರಾ ಅವರನ್ನು ನೂತನ ನಾಯಕನನ್ನಾಗಿ ಘೋಷಿಸಿದೆ. ಫೆರೇರಾ ಈ ಹಿಂದೆ ಓವಲ್ ಇನ್ವಿಸಿಬಲ್ಸ್ ತಂಡದ ಪರ ಆಡಿ ಎರಡು ಬಾರಿ ‘ದಿ ಹಂಡ್ರೆಡ್’ ಪ್ರಶಸ್ತಿ ಗೆದ್ದ ಅನುಭವ ಹೊಂದಿದ್ದಾರೆ. ಇದೀಗ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಪರ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಇದನ್ನೂ ಓದಿ: ಓವರ್ ಇಲ್ಲ, ಸೂಪರ್ ಫೈವ್, ಬೋನಸ್ ರನ್: ದಿ ಹಂಡ್ರೆಡ್ ಲೀಗ್ ಹೊಸ ನಿಯಮ