‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ ಹಾಗೂ ಒಳಚಿತ್ರದಲ್ಲಿ ಬಂಧಿತ ಆರೋಪಿ ರಾಜಾರೆಡ್ಡಿImage Credit source: tv9
ಬೆಂಗಳೂರು, ಜೂನ್ 11: ಓದದೇ ಇದ್ದರೂ ಪದವಿ ಕೊಡಿಸುವುದಾಗಿ ನಂಬಿಸಿ ನಕಲಿ ಅಂಕಪಟ್ಟಿಗಳನ್ನು (Fake Marks Card) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನಗರದ ಕೋರಮಂಗಲದಲ್ಲಿ ಕಚೇರಿ ತೆರೆದು ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದ ಪ್ರಮುಖ ಆರೋಪಿ ರಾಜಾರೆಡ್ಡಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ದಂಧೆಯ ಪ್ರಮುಖ ಸೂತ್ರಧಾರಿಗಳು ಎನ್ನಲಾದ ಕಾರ್ತಿಕ್ ಹಾಗೂ ಆರ್ಯನ್ ಎಂಬುವವರು ಸದ್ಯ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದು, ಅವರಿಗಾಗಿ ಖಾಕಿ ಪಡೆ ಬಲೆ ಬೀಸಿದೆ.
ಮುಖ್ಯಾಂಶಗಳು
- ಸಿಸಿಬಿ ಪೊಲೀಸರಿಂದ ನಕಲಿ ಅಂಕಪಟ್ಟಿ ಜಾಲ ಪತ್ತೆ.
- ಕೋರಮಂಗಲದಲ್ಲಿ ರಾಜಾರೆಡ್ಡಿ ಎಂಬ ಆರೋಪಿ ಬಂಧನ.
- ₹30 ರಿಂದ ₹50 ಸಾವಿರಕ್ಕೆ ಮಾರಾಟ.
ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ ಹೆಸರಿನಲ್ಲಿ ವಂಚನೆ
ಬಂಧಿತ ಆರೋಪಿ ರಾಜಾರೆಡ್ಡಿ ಕೋರಮಂಗಲದಲ್ಲಿ ‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ (Digital Distance Education Mission)’ ಹೆಸರಿನಲ್ಲಿ ನಕಲಿ ಕಚೇರಿ ತೆರೆದಿದ್ದ. ವಿವಿಧ ಕಾಲೇಜುಗಳಲ್ಲಿ ಅಡ್ಮಿಷನ್ ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ಫೋನ್ ಕರೆ ಮಾಡುತ್ತಿದ್ದ ಈತ, ಫ್ಲಾರೆನ್ಸ್, ಕಲಾನಿಕೇತನ್, ಎಂವಿಜೆ (MVJ) ಹಾಗೂ ಟಿಪ್ಪು ಸುಲ್ತಾನ್ ಕಾಲೇಜು ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ. ಕಾಲೇಜಿಗೆ ಹೋಗಿ ಓದದೇ ಇದ್ದರೂ ನೇರವಾಗಿ ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ ಎಂದು ನಂಬಿಸಿ, ಹಣ ಪಡೆದು ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿಕೊಡುತ್ತಿದ್ದನು.
ದುಡ್ಡು ಕೊಟ್ರೆ ಮನೆಗೇ ಬರುತ್ತಿತ್ತು ಅಂಕಪಟ್ಟಿಯುಳ್ಳ ಕೊರಿಯರ್
ಆರೋಪಿ ರಾಜಾರೆಡ್ಡಿಯು ತಲೆಮರೆಸಿಕೊಂಡಿರುವ ಆರ್ಯನ್ ಹಾಗೂ ಕಾರ್ತಿಕ್ ಸಹಾಯದಿಂದ ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC) ಹಾಗೂ ವಿವಿಧ ಪದವಿಗಳ (Degree) ನಕಲಿ ಅಂಕಪಟ್ಟಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸುತ್ತಿದ್ದ. ಈ ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನು ಪ್ರತಿಯೊಂದಕ್ಕೆ 30,000 ದಿಂದ 50,000 ರೂ.ವರೆಗಿನ ದರಕ್ಕೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ. ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಹಣ ಪಡೆದು, ನಕಲಿ ಅಂಕಪಟ್ಟಿಗಳನ್ನು ಅವರ ಮನೆ ವಿಳಾಸಕ್ಕೆ ಕೊರಿಯರ್ (Courier) ಮೂಲಕ ತಲುಪಿಸುವ ಮೂಲಕ ಯಾರಿಗೂ ಅನುಮಾನ ಬಾರದಂತೆ ಜಾಲ ನಡೆಸುತ್ತಿದ್ದ.
50ಕ್ಕೂ ಅಧಿಕ ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆ
ನಗರದಲ್ಲಿ ಇಂತಹದ್ದೊಂದು ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಕೋರಮಂಗಲದ ಕಚೇರಿಯ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕಚೇರಿಯಲ್ಲಿದ್ದ 50ಕ್ಕೂ ಅಧಿಕ ನಕಲಿ ಅಂಕಪಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜಾರೆಡ್ಡಿಯನ್ನು ಜೈಲಿಗಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರ ತಂಡ ತನಿಖೆ ಮುಂದುವರಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ