ಗದಗ, (ಏಪ್ರಿಲ್ 19): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆ ಮುಗಿಯುತ್ತಿದ್ದಂತೆಯೆ ಕರ್ನಾಟಕ ಕಾಂಗ್ರೆಸ್ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಮುಸ್ಲಿಂ ನಾಯಕರ ಅಸಮಾಧಾನ, ಇನ್ನೊಂದೆಡೆ ಸಂಪುಟ ಪುನಾರಚನೆ ಕೂಗು, ಮತ್ತೊಂದೆಡೆ ಇದೀಗ ನಾಯಕತ್ವ ಬದಲಾವಣೆ ಮತ್ತೆ ಮುನ್ನಲೆಗೆ ಬಂದಿದೆ. ಹೌದು….ಸಿಎಂ ಕುರ್ಚಿಗೆ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದಾರೆ. ಆದ್ರೆ, ಅದಕ್ಕೂ ಮುನ್ನ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರದ ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಸಿಎಂ ಸ್ಥಾನದ ಬಗ್ಗೆ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದಾರೆಂದು ವಿಮಲ ರೇಣುಕಾಮುನಿ ಶಿವಾಚಾರ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮುಕ್ತಿಮಂದಿರದ ವಿಮಲ ರೇಣುಕಾಮುನಿ ಶಿವಾಚಾರ್ಯರ ಮಾಧ್ಯಮಗಳಿಗೆ ಮಾತನಾಡಿದ್ದು,
ಸಿಎಂ ಸ್ಥಾನದ ಬಗ್ಗೆ ಸಂಕಲ್ಪ ಮಾಡಿ ಡಿಕೆ ಶಿವಕುಮಾರ್ ಅವರು ಪೂಜೆ ಮಾಡಿದ್ದಾರೆ. ಹಾಗೇ ಅವರಿಗೆ ಬಂದಿರುವ ಕಷ್ಟ ನಷ್ಟಗಳು ದೂರ ಆಗಲೆಂದು ಪ್ರಾರ್ಥಿಸಿದ್ದು, ವೀರಗಂಗಾಧರ ಗುರುಗಳು ಡಿ.ಕೆ.ಶಿವಕುಮಾರ್ಗೆ ಆಶೀರ್ವಾದ ಮಾಡಲಿ ಎಂದಿದ್ದಾರೆ.
ಇದನ್ನೂ ನೋಡಿ: ಸಚಿವ ಜಮೀರ್ ಮತ್ತೆ ಜೆಡಿಎಸ್ ಸೇರ್ತಾರೆ ಎನ್ನುವ ಚರ್ಚೆ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ
ಇನ್ನು ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನಾನು ಏನೂ ಮಾತನಾಡುವುದಿಲ್ಲ, ಕಾಲವೇ ಉತ್ತರ ಕೊಡುತ್ತದೆ. ವಿಶೇಷವಾದ ಪವಿತ್ರ ಸ್ಥಳ, ವೀರಗಂಗಾಧರ ಶ್ರೀಗಳ ಲಿಂಗೈಕ್ಯರಾದ ಸ್ಥಳ. ಇಡೀ ಪ್ರಪಂಚ ಮಾನವ ಧರ್ಮದ ಮೇಲೆ ನಿಂತಿದೆ. ಬಿಡುವು ಸಿಕ್ಕಾಗ ಪುಸ್ತಕ ಬರೆದು ಸಮಾಜಕ್ಕೆ ತಿಳಿಸುತ್ತೇನೆ. ಈ ಮಠದ ಆಶೀರ್ವಾದ ಪಡೆದಿದ್ದೇನೆ, ದೊಡ್ಡ ಶಕ್ತಿ ಬಂದಿದೆ. ಯಾರೂ ಧರ್ಮ ಬೇಡ ಎನ್ನಲ್ಲ, ಅವರವರ ಧರ್ಮ ಕಾಪಾಡುತ್ತಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ