ನವದೆಹಲಿ, ಜುಲೈ 11: ಭಾರತದ ಜೈಲಿನಲ್ಲಿ ನೀಡಲಾಗುವ ಮಸಾಲೆಯುಕ್ತ, ಎಣ್ಣೆ ಮತ್ತು ಕರಿದ ಪದಾರ್ಥಗಳ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ, ತನಗೆ “ಅಮೆರಿಕನ್ ಶೈಲಿಯ ಆಹಾರ” ನೀಡಬೇಕು ಹಾಗೂ ಸ್ವತಃ ಅಡುಗೆ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿ ಅಮೆರಿಕದ ಪ್ರಜೆಯೊಬ್ಬರು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಎಂಬ ಹೆಸರಿನ ಈ ಕೈದಿ, ಜೈಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳಲಾಗದೆ ಮೇ 6 ರಿಂದ ಉಪವಾಸ ಮಾಡುತ್ತಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಎನ್‌ಐಎ (NIA) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಜೈಲು ಅಧೀಕ್ಷಕರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು, ಜುಲೈ 21 ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ್ದಾರೆ.
ಸೋಯಾ ಹಾಲಿನಲ್ಲೇ 50 ದಿನ ಕಳೆದ ಕೈದಿ!
ಆರೋಪಿಯ ಪರ ವಕೀಲರಾದ ರೋಹಿತ್ ಗೌರ್ ಮತ್ತು ರೋಹಿತ್ ದಂಡ್ರಿಯಾಲ್ ಅವರು ಮಾನವೀಯತೆಯ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಳೆದ 50 ದಿನಗಳಿಂದ ಮ್ಯಾಥ್ಯೂ ಕೇವಲ ಸೋಯಾ ಹಾಲಿನಂತಹ ದ್ರವ ಆಹಾರವನ್ನು ಸೇವಿಸಿ ಬದುಕುತ್ತಿದ್ದು, ಪರಿಣಾಮವಾಗಿ ಸುಮಾರು 14 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಜೈಲಿನಲ್ಲಿ ಇಂಡಕ್ಷನ್ ಕುಕ್ಕರ್ ಮತ್ತು ಕೆಲವು ಮೂಲಭೂತ ಪಾತ್ರೆಗಳನ್ನು ಬಳಸಿ ತಾನೇ ಅಡುಗೆ ಮಾಡಿಕೊಳ್ಳಲು ಹಾಗೂ ಬೇಳೆಕಾಳುಗಳು, ಚಿಕನ್, ರೆಡ್ ಮೀಟ್, ಪಾಸ್ತಾ, ಆಲಿವ್ ಆಯಿಲ್ ಮತ್ತು ಬಾಟಲಿ ನೀರನ್ನು ಇಟ್ಟುಕೊಳ್ಳಲು ಅನುಮತಿ ಕೋರಿದ್ದಾರೆ. ಈ ಎಲ್ಲಾ ಆಹಾರದ ವೆಚ್ಚವನ್ನು ಅವರ ಕುಟುಂಬವೇ ಭರಿಸಲು ಸಿದ್ಧವಿದೆ ಎಂದು ವಕೀಲರು ತಿಳಿಸಿದ್ದಾರೆ.
ಪೌಷ್ಟಿಕಾಂಶದ ಕೊರತೆಯಿಂದಾಗಿ ಮ್ಯಾಥ್ಯೂ ಅವರ ದೃಷ್ಟಿ ದೋಷ ಕೂಡ ಉಲ್ಬಣಗೊಂಡಿದ್ದು, ಜುಲೈ 3 ರಂದು ಕೋರ್ಟ್‌ಗೆ ಹಾಜರಾದಾಗ ಅವರು ಸರಿಯಾಗಿ ನಿಲ್ಲಲು ಸಾಧ್ಯವಾಗದಷ್ಟು ಅಶಕ್ತರಾಗಿದ್ದ ಎನ್ನಲಾಗಿದೆ. ಆಹಾರದ ಜೊತೆಗೆ ಸೊಳ್ಳೆ ಪರದೆ ಮತ್ತು ಲಿಕ್ವಿಡ್ ರಿಪೆಲೆಂಟ್ ಒದಗಿಸುವಂತೆಯೂ ಅವರು ಕೋರಿದ್ದಾರೆ.
ಯಾರೂ ಈ ಮ್ಯಾಥ್ಯೂ?
ಮ್ಯಾನ್ಮಾರ್ ಗಡಿಯ ಮೂಲಕ ಮಿಜೋರಾಂ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮಾರ್ಚ್ 13 ರಂದು ಎನ್‌ಐಎ ಅಧಿಕಾರಿಗಳು ಮ್ಯಾಥ್ಯೂ ಮತ್ತು ಆರು ಉಕ್ರೇನ್ ಪ್ರಜೆಗಳನ್ನು ಬಂಧಿಸಿದ್ದರು. ಭಾರತ ಮತ್ತು ಮ್ಯಾನ್ಮಾರ್‌ನ ಉಗ್ರಗಾಮಿ ಗುಂಪುಗಳಿಗೆ ತರಬೇತಿ ನೀಡುವುದು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಗಡಿಯಾಚೆಗಿನ ಭಯೋತ್ಪಾದನಾ ಪಿತೂರಿಯ ಭಾಗವಾಗಿ ಈ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂದು ಎನ್‌ಐಎ ಗಂಭೀರ ಆರೋಪ ಹೊರಿಸಿದೆ.
ರಾಷ್ಟ್ರದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ