ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ರಂಗಾಯಣ ರಘು (Rangayana Raghu) ಅವರು ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಹಾಸ್ಯ ಹಾಗೂ ನೆಗೆಟಿವ್ ಪಾತ್ರಗಳು ಅವರನ್ನು ಅರಸಿ ಬರುತ್ತವೆ. ಇದರ ಜೊತೆಗೆ ಇತ್ತೀಚೆಗೆ ಸಸ್ಪೆನ್ಸ್ ಪಾತ್ರಗಳಿಗೂ ಅವರು ಕೈ ಹಾಕಿದ್ದಾರೆ. ‘ಶಾಖಾಹಾರಿ’ ಸಿನಿಮಾ ಬೇರೆಯದೇ ಹಂತದಲ್ಲಿ ಇತ್ತು. ಈಹ ಅವರು ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುವ ಅವರು, ಸದ್ಯ ತೀವ್ರ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದಾರೆ. ಸದ್ಯ ಈ ಚಿತ್ರದ ರೋಚಕ ಟೀಸರ್ ಹೊಂಬಾಳೆ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆಯುತ್ತಿದೆ.
‘ಮರ್ಯಾದೆ ಪ್ರಶ್ನೆ’ ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದ ನಿರ್ದೇಶಕ ನಾಗರಾಜ್ ಸೋಮಯಾಜಿ ಅವರು ಈ ಚಿತ್ರದ ಮೂಲಕ ಒಂದು ಸಸ್ಪೆನ್ಸ್ ಹಾಗೂ ರೋಮಾಂಚನಕಾರಿ ಕಥೆಯನ್ನು ಹೇಳಲು ಹೊರಟಿದ್ದಾರೆ ಎಂಬುದು ಟೀಸರ್ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. 1 ನಿಮಿಷ 5 ಸೆಕೆಂಡ್ಗಳ ಈ ಟೀಸರ್ನಲ್ಲಿ ಸಮುದ್ರ ತೀರದ ದೃಶ್ಯಗಳು, ಹುಲಿ ವೇಷದ ಅಬ್ಬರ ಹಾಗೂ ರಂಗಾಯಣ ರಘು ಅವರ ಅಭಿನಯ ಪ್ರಮುಖ ಹೈಲೈಟ್ ಆಗಿ ಮೂಡಿಬಂದಿವೆ. ಇದಕ್ಕೆ ಲಿಕಿತ್ ಪ್ರಸಾದ್ ಕೆ. ಶೆಟ್ಟಿ ಅವರ ಹಿನ್ನೆಲೆ ಸಂಗೀತ ಮತ್ತಷ್ಟು ಥ್ರಿಲ್ಲಿಂಗ್ ಅನುಭವ ನೀಡಿದೆ.
ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿಡಿ ಸತೀಶ್ ಚಂದ್ರ, ಪಲ್ಲವಿ ಮಂಜುನಾಥ್, ಶೈಲಶ್ರೀ ಮೂಲ್ಕಿ, ಶ್ವೇತಾ ಶ್ರೀನಿವಾಸ ಹಾಗೂ ಮಹಾದೇವ ಹಡಪದ್ ಅವರನ್ನೊಳಗೊಂಡ ದೊಡ್ಡ ಕಲಾವಿದರ ಬಳಗವೇ ಇದೆ. ಚಿತ್ರಕ್ಕೆ ನಾಗರಾಜ್ ಸೋಮಯಾಜಿ ಅವರೇ ಚಿತ್ರಕಥೆ ಬರೆದಿದ್ದು, ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ, ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗದಲ್ಲಿ ರಂಗಾಯಣ ರಘು ‘ಹೊಸ ಜೀವನ’; 400ನೇ ಸಿನಿಮಾ ಒಪ್ಪಿಕೊಂಡ ನಟ
‘ಯುವಿಜಿ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿರಾಜನ್ ಮತ್ತು ಗಾಂಧಿರಾಜನ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಅತ್ಯುತ್ತಮ ತಾಂತ್ರಿಕ ವರ್ಗ ಕೆಲಸ ಮಾಡಿದ್ದು, ಎಸ್.ಕೆ. ರಾವ್ ಅವರ ಸಿನಿಮಾಟೋಗ್ರಫಿ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನ ಚಿತ್ರದ ತೂಕವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಮೂಡಿಸಿದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.