ಬೆಂಗಳೂರು, ಜುಲೈ 18: ಉಸಿರಾಟದ ತೊಂದರೆ ಅಂತಾ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ಸೇರಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ (HD Deve Gowda) ಪತ್ನಿ ಚೆನ್ನಮ್ಮ ಶನಿವಾರ ವಿಧಿವಶರಾಗಿದ್ದಾರೆ. ಬದುಕಿನುದ್ದಕ್ಕೂ ಹಲವು ಸಂಕಷ್ಟ ಎದುರಿಸಿ ಗೆದ್ದಿದ್ದ ಚೆನ್ನಮ್ಮ (Chennamma), ಈ ಬಾರಿ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ರಾಜಕೀಯ ನಾಯಕರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ
”ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು ಸಮೀಪದಿಂದ ಬಲ್ಲವನು. ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ – ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು”.
ಇದನ್ನೂ ಓದಿ: ದೇವೇಗೌಡರ ಬೆನ್ನಿಗೆ ನಿಂತಿದ್ದ ಧೀಶಕ್ತಿ: ಅತಿಥಿಗಳ ಪಾಲಿನ ಅನ್ನಪೂರ್ಣೆ; ಕುಟುಂಬ ಮುನ್ನಡೆಸಿದ ಮಹಾತಾಯಿ ‘ಚೆನ್ನಮ್ಮ’
”ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಸಚಿವ ಪ್ರಲ್ಹಾದ ಜೋಶಿ ಸಂತಾಪ
‘‘ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸರಳತೆ ಹಾಗೂ ತಾಳ್ಮೆಯ ಸಾಕಾರಮೂರ್ತಿಯಾಗಿದ್ದ ಅವರು, ಶ್ರೀ ದೇವೇಗೌಡರ ಸುದೀರ್ಘ ಸಾರ್ವಜನಿಕ ಜೀವನಕ್ಕೆ ಭದ್ರ ಬುನಾದಿಯಾಗಿ, ಇಡೀ ಕುಟುಂಬವನ್ನು ಮಮತೆಯಿಂದ ಮುನ್ನಡೆಸಿದ ಆದರ್ಶ ಮಾತೃಶಕ್ತಿಯಾಗಿದ್ದರು. ಅವರ ಅಗಲಿಕೆ ಗೌಡರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಾಪ ಸೂಚಿಸಿದ್ದಾರೆ.
ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ
‘‘ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ನೋವಾಯಿತು. ಅವರ ಸರಳತೆ, ಸಹನೆ ಹಾಗೂ ತಮ್ಮ ಕುಟುಂಬಕ್ಕೆ ನೀಡಿದ ಅಚಲ ಬೆಂಬಲ ಸದಾ ಸ್ಮರಣೀಯವಾದದ್ದು. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ದೇವೇಗೌಡರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ.
ಆರ್. ಅಶೋಕ್ ಸಂತಾಪ
ಇನ್ನು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಸಂತಾಪ ಸೂಚಿಸಿದ್ದಾರೆ. ‘‘ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಒಬ್ಬ ಕುಟುಂಬದ ಮಾತೃಮೂರ್ತಿಯ ಅಗಲಿಕೆ ಆ ಕುಟುಂಬಕ್ಕೆ ಎಂದಿಗೂ ತುಂಬಲಾರದ ನಷ್ಟ. ಈ ಕಠಿಣ ಮತ್ತು ನೋವಿನ ಕ್ಷಣದಲ್ಲಿ ಪೂಜ್ಯ ಶ್ರೀ ಎಚ್.ಡಿ. ದೇವೇಗೌಡ ಅವರಿಗೂ, ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಹಾಗೂ ಶ್ರೀ ದೇವೇಗೌಡರ ಕುಟುಂಬದ ಎಲ್ಲ ಸದಸ್ಯರಿಗೂ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ. ಭಗವಂತನು ದಿವಂಗತ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ’’ ಎಂದಿದ್ದಾರೆ.
ಇದನ್ನೂ ಓದಿ: ಕುಟುಂಬದ ಹೊರೆ ಬೀಳದಂತೆ ಸಂಸಾರ ನಿಭಾಯಿಸಿದ್ದ ಹೆಂಡ್ತಿಯನ್ನು ಕಳೆದುಕೊಂಡು ದೇವೇಗೌಡ್ರು ಕಣ್ಣೀರು
ಎಂಎಲ್ಸಿ ಸಿ.ಟಿ.ರವಿ ಸಂತಾಪ ಸೂಚಿಸಿದ್ದು, ‘‘ದೇವೇಗೌಡರ ರಾಜಕೀಯ ಏಳುಬೀಳುಗಳಲ್ಲಿ ಜತೆಯಾಗಿದ್ದರು. ಮನೆಗೆ ಯಾರೇ ಬಂದರೂ ಪ್ರೀತಿಯಿಂದ ಕಾಣುತ್ತಿದ್ದರು. ಯಜಮಾನರ ಸಾರ್ವಜನಿಕ ಕಾರ್ಯಕ್ಕೆ ಶಕ್ತಿಯಾಗಿದ್ದರು. ಮಾತೃಶ್ರೀಯಾಗಿಯೇ ಇದ್ದಂತಹ ಚೆನ್ನಮ್ಮ ಅಗಲಿದ್ದಾರೆ. ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’’ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:17 pm, Sat, 18 July 26