ನವದೆಹಲಿ, ಮೇ 16: ಭಾರತದಲ್ಲಿ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) 182 ಕೋಟಿ ಮೌಲ್ಯದ ಕ್ಯಾಪ್ಟಗನ್ ಟ್ಯಾಬ್ಲೆಟ್ಗಳನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಈ ಡ್ರಗ್ಸ್ ಅನ್ನು ಪಶ್ಚಿಮ ಏಷ್ಯಾಕ್ಕೆ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಆಪರೇಷನ್ ರೇಜ್ಪಿಲ್ (Operation Ragepill) ಅಡಿಯಲ್ಲಿ ಈ ಡ್ರಗ್ಸ್ ಸಾಗಾಟವನ್ನು ತಡೆಹಿಡಿಯಲಾಗಿದೆ ಎಂದು ಅಮಿತ್ ಶಾ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ. ಮುಂದ್ರಾ ಬಂದರು ಮತ್ತು ದೆಹಲಿಯ ನೆಬ್ ಸರಾಯ್ನಿಂದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಿರಿಯನ್ ಪ್ರಜೆ ಆ ಡ್ರಗ್ಸ್ ಅನ್ನು ಚಹಾ ಎಲೆಗಳ ಪೆಟ್ಟಿಗೆಯಲ್ಲಿ ಮರೆಮಾಡಿದ್ದರು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ಮೋದಿ ಸರ್ಕಾರ ‘ಮಾದಕವಸ್ತು ಮುಕ್ತ ಭಾರತ’ಕ್ಕೆ ಸಂಕಲ್ಪ ಮಾಡಿದೆ. ‘ಆಪರೇಷನ್ ರೇಜ್ಪಿಲ್’ ಮೂಲಕ ನಮ್ಮ ಏಜೆನ್ಸಿಗಳು 182 ಕೋಟಿ ರೂ. ಮೌಲ್ಯದ “ಜಿಹಾದಿ ಡ್ರಗ್” ಎಂದು ಕರೆಯಲ್ಪಡುವ ಕ್ಯಾಪ್ಟಗನ್ ಅನ್ನು ಮೊದಲ ಬಾರಿಗೆ ವಶಪಡಿಸಿಕೊಂಡಿವೆ ಎಂಬ ವಿಷಯವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಮಧ್ಯಪ್ರಾಚ್ಯಕ್ಕೆ ಸಾಗಿಸುತ್ತಿದ್ದ ಈ ಡ್ರಗ್ಸ್ ಜಾಲವನ್ನು ಭೇದಿಸುವುದು ಮತ್ತು ವಿದೇಶಿ ಪ್ರಜೆಯ ಬಂಧನವು ಮಾದಕವಸ್ತುಗಳ ವಿರುದ್ಧದ ಭಾರತದ ಶೂನ್ಯ ಸಹಿಷ್ಣುತೆಗೆ ನಮ್ಮ ಬದ್ಧತೆಗೆ ಉದಾಹರಣೆಗಳಾಗಿವೆ. ಭಾರತಕ್ಕೆ ಪ್ರವೇಶಿಸುವ ಅಥವಾ ನಮ್ಮ ಪ್ರದೇಶವನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಂಡು ಸಾಗಾಟವಾಗುವ ಪ್ರತಿ ಗ್ರಾಂ ಮಾದಕವಸ್ತುಗಳನ್ನು ನಾವು ತಡೆಯುತ್ತೇವೆ. ಎನ್ಸಿಬಿಯ ಧೈರ್ಯಕ್ಕೆ ನಮ್ಮ ಧನ್ಯವಾದಗಳು.” ಎಂದು ಹೇಳಿದ್ದಾರೆ.
Modi govt is resolved for a ‘Drug-Free India’.
Glad to share that through ‘Operation RAGEPILL’, our agencies have achieved the first-ever seizure of Captagon, the so-called “Jihadi Drug”, worth ₹182 crore.
The busting of the drug consignment destined for the Middle East and…
— Amit Shah (@AmitShah) May 16, 2026
ಇದನ್ನೂ ಓದಿ: ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್!
ಕ್ಯಾಪ್ಟಗನ್ ಹೆಚ್ಚು ವ್ಯಸನಕಾರಿಯಾದ ಸಿಂಥೆಟಿಕ್ ಆಂಫೆಟಮೈನ್-ಮಾದರಿಯ ಉತ್ತೇಜಕವಾಗಿದೆ. ಇದಕ್ಕೆ “ಜಿಹಾದಿ ಡ್ರಗ್” ಎಂಬ ಅಡ್ಡಹೆಸರನ್ನು ಇಡಲಾಗಿದೆ. ಏಕೆಂದರೆ ಐಸಿಸ್ನಂತಹ ಉಗ್ರಗಾಮಿ ಗುಂಪುಗಳು ದಾಳಿಯ ವೇಳೆ ಭಯವನ್ನು ಕಡಿಮೆ ಮಾಡಿಕೊಳ್ಳಲು, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಡ್ರಗ್ಸ್ ಬಳಸುತ್ತಾರೆ ಎಂದು ವರದಿಯಾಗಿದೆ. ಇದನ್ನು “ಬಡವರ ಕೊಕೇನ್” ಎಂದೂ ಕರೆಯಲಾಗುತ್ತದೆ. ಇದು ಬಹಳ ಸ್ಟ್ರಾಂಗ್ ಆದ ಡ್ರಗ್ಸ್ಗಳಲ್ಲೊಂದು.
ಇದನ್ನೂ ಓದಿ: ಬೆಂಗಳೂರಿನ ಡ್ರಗ್ಸ್ ಮಾಫಿಯಾಗೆ ಪೊಲೀಸರ ಬಿಗ್ ಶಾಕ್: 13 ಕೆಜಿಗೂ ಹೆಚ್ಚು ಮಾದಕ ವಸ್ತುಗಳು ಸೀಜ್!
ಭಾರತವು ಕನಿಷ್ಠ 200 ಪ್ರಮುಖ ಮತ್ತು ಸಣ್ಣ ಬಂದರುಗಳನ್ನು ಹೊಂದಿದೆ. ಆದರೆ, ಅವುಗಳಲ್ಲಿ ಸುಮಾರು 65 ಮಾತ್ರ ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಪ್ರಸ್ತುತ, 13 ಪ್ರಮುಖ ಬಂದರುಗಳು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವ್ಯಾಪ್ತಿಗೆ ಒಳಪಟ್ಟಿವೆ. ಈ ಪಡೆ ಶೀಘ್ರದಲ್ಲೇ 67 ಹೆಚ್ಚುವರಿ ಬಂದರುಗಳಲ್ಲಿ ಭದ್ರತೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ. ಬಂದರುಗಳ ಭದ್ರತೆಯನ್ನು ಬಲಪಡಿಸಲು ಮತ್ತು ಕಳ್ಳಸಾಗಣೆ ಚಟುವಟಿಕೆಗಳನ್ನು ನಿಗ್ರಹಿಸಲು, ಕೇಂದ್ರ ಸರ್ಕಾರವು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಮಾದರಿಯಲ್ಲಿ ಹೊಸ ಫೆಡರಲ್ ಸಂಸ್ಥೆಯಾದ ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ (BoPS) ಅನ್ನು ರಚಿಸುವ ಪ್ರಕ್ರಿಯೆ ನಡೆಸುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ