Headlines

ದೇಶದ ಆಹಾರ ಭದ್ರತಾ ವ್ಯವಸ್ಥೆ ಬಲಪಡಿಸಲು ದಿಟ್ಟ ನಿರ್ಧಾರ: ಗುಣಮಟ್ಟದ ಅಕ್ಕಿ ಪೂರೈಕೆಗೆ ಕೇಂದ್ರ ಅನುಮೋದನೆ – Kannada News | Modi Government approves supply of improved quality rice under PMGKAY; over 80 crore beneficiaries to receive better quality rice

ನವದೆಹಲಿ, (ಜುಲೈ 02): ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಪೂರೈಕೆಯಾಗುವ ಅಕ್ಕಿಯ ಗುಣಮಟ್ಟವನ್ನು ಸುಧಾರಿಸುವ ಐತಿಹಾಸಿಕ ಸುಧಾರಣಾ ಕ್ರಮಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಅನುಮೋದನೆ ನೀಡಿದೆ. ಸರಿಸುಮಾರು ಮೂರು ದಶಕಗಳಲ್ಲಿ ಮೊದಲ ಬಾರಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (PDS) ಪೂರೈಸಲಾಗುವ ಅಕ್ಕಿಯ ಗುಣಮಟ್ಟದ ಮಾನದಂಡಗಳನ್ನು ಸರ್ಕಾರವು ಪರಿಷ್ಕರಿಸಿದೆ. ಇದರಿಂದ ಫಲಾನುಭವಿಗಳು ಪ್ರಸ್ತುತ ಪಡೆಯುತ್ತಿರುವ ಪಾಲಿನಲ್ಲಿ ಯಾವುದೇ ಕಡಿತವಿಲ್ಲದೆ, ಗಮನಾರ್ಹವಾಗಿ ಕಡಿಮೆ ನುಚ್ಚು ಇರುವ ಅಕ್ಕಿಯನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ.

ಅನುಮೋದಿತ ನೀತಿಯ ಅನ್ವಯ

ಪಿ.ಎಂ.ಜಿ.ಕೆ.ಎ.ವೈ ಅಡಿಯಲ್ಲಿ ಪೂರೈಸಲಾಗುವ ಹಸಿ ಅಕ್ಕಿಯಲ್ಲಿ (Raw rice) ಗರಿಷ್ಠ 10% ನುಚ್ಚು ಇರಲಿದೆ. ಇದು ಈ ಹಿಂದಿನ ಗರಿಷ್ಠ 25% ಮಾನದಂಡವನ್ನು ಬದಲಾಯಿಸುತ್ತದೆ. ಕುಸುಬಲಕ್ಕಿಯಲ್ಲಿ (Parboiled rice) ಗರಿಷ್ಠ 5% ನುಚ್ಚು ಇರಲಿದೆ. ಇದು ಈ ಹಿಂದಿನ ಗರಿಷ್ಠ 16% ಮಾನದಂಡವನ್ನು ಬದಲಾಯಿಸುತ್ತದೆ. ಸುಧಾರಿತ ಗುಣಮಟ್ಟದ ಅಕ್ಕಿಯ ಖರೀದಿಯು ತಕ್ಷಣವೇ ಪ್ರಾರಂಭವಾಗಲಿದ್ದು, 2027–28ರ ಖಾರಿಫ್ ಮಾರುಕಟ್ಟೆ ಋತುವಿನ (KMS) ವೇಳೆಗೆ ಅಕ್ಕಿ ಖರೀದಿಸುವ ಎಲ್ಲಾ ರಾಜ್ಯಗಳಲ್ಲಿ ಇದನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು.

ಇದನ್ನೂ ಓದಿ: ವಿಬಿ-ಜಿ-ರಾಮ್​​ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು?

ಪಿ.ಎಂ.ಜಿ.ಕೆ.ಎ.ವೈ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸುಧಾರಿತ ಗುಣಮಟ್ಟದ ಅಕ್ಕಿಯ ವಿತರಣೆಯನ್ನು ಸಹ ಹಂತಹಂತವಾಗಿ ಕೈಗೊಳ್ಳಲಾಗುವುದು. ಇದು ಎಲ್ಲಾ ರಾಜ್ಯಗಳಲ್ಲಿ ಪರಿಷ್ಕೃತ ಮಾನದಂಡಗಳಿಗೆ ಸುಗಮವಾಗಿ ಬದಲಾಗುವುದನ್ನು ಖಚಿತಪಡಿಸುತ್ತದೆ.

ಫಲಾನುಭವಿಗಳಿಗೆ ಉತ್ತಮ ಗುಣಮಟ್ಟ

ಈ ನಿರ್ಧಾರವು ಕೇವಲ ಆಹಾರ ಭದ್ರತೆಯನ್ನು ಖಚಿತಪಡಿಸುವುದಲ್ಲದೆ, PMGKAY ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪೂರೈಸಲಾಗುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಸುಧಾರಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಫಲಾನುಭವಿಗಳು ತಮ್ಮ ಪಾಲಿನಲ್ಲಿ ಯಾವುದೇ ಕಡಿತವಿಲ್ಲದೆ ಅತ್ಯುತ್ತಮ ಗುಣಮಟ್ಟದ ಕಾಳುಗಳು, ಸುಧಾರಿತ ನೋಟ ಮತ್ತು ಗ್ರಾಹಕರಿಗೆ ಹೆಚ್ಚು ಇಷ್ಟವಾಗುವಂತಹ ಅಕ್ಕಿಯನ್ನು ಪಡೆಯಲಿದ್ದಾರೆ.

ನುಚ್ಚಕ್ಕಿಯ ಉತ್ಪಾದಕ ಬಳಕೆ

ಪರಿಷ್ಕೃತ ಮಾನದಂಡಗಳ ಅಡಿಯಲ್ಲಿ, ಅಕ್ಕಿ ಗಿರಣಿ ಪ್ರಕ್ರಿಯೆಯಲ್ಲಿ (ಮಿಲ್ಲಿಂಗ್) ಉತ್ಪತ್ತಿಯಾಗುವ ನುಚ್ಚಕ್ಕಿಯನ್ನು ಪ್ರತ್ಯೇಕಿಸಲಾಗುವುದು ಮತ್ತು ಇತರ ಉದ್ದೇಶಗಳಿಗಾಗಿ ಉತ್ಪಾದಕವಾಗಿ ಬಳಸಿಕೊಳ್ಳಲಾಗುವುದು. ಇದು PMGKAY ಅಡಿಯಲ್ಲಿ ಫಲಾನುಭವಿಗಳಿಗೆ ಅತ್ಯುತ್ತಮ ಗುಣಮಟ್ಟದ, ಸೇವನೆಗೆ ಯೋಗ್ಯವಾದ ಅಕ್ಕಿ ತಲುಪುವುದನ್ನು ಖಚಿತಪಡಿಸುತ್ತದೆ.

ಆರ್ಥಿಕ ಮತ್ತು ಕಾರ್ಯಾಚರಣೆಯ ಲಾಭಗಳು

ನುಚ್ಚು ಅಕ್ಕಿಯನ್ನು ನೇರವಾಗಿ ಗಿರಣಿದಾರರ (ಮಿಲ್) ಆವರಣದಿಂದಲೇ ಹರಾಜು ಮಾಡಲಾಗುವುದರಿಂದ, ಈ ಸುಧಾರಣಾ ಕ್ರಮವು ಸಾರಿಗೆ, ಸಂಗ್ರಹಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಲು ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನುಚ್ಚು ಅಕ್ಕಿಯನ್ನು ಎಚ್ ಡಿ ಪಿ ಇ (HDPE) ಚೀಲಗಳಲ್ಲಿ ಶೇಖರಿಸಿಡಲಾಗುವುದರಿಂದ, ಸೆಣಬಿನ ಚೀಲಗಳ ಅಗತ್ಯತೆಯೂ ಕಡಿಮೆಯಾಗಲಿದೆ. ಇದರಿಂದಾಗಿ ಸರಕು ಸಾಗಣೆ, ಸಂಗ್ರಹಣೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ಕಡಿಮೆಯಾಗಿ ವಾರ್ಷಿಕವಾಗಿ 2,161 ಕೋಟಿ ರೂಪಾಯಿಗಳಷ್ಟು ವೆಚ್ಚ ಉಳಿತಾಯವಾಗುವ ನಿರೀಕ್ಷೆಯಿದೆ. ಇದರ ಜೊತೆಗೆ, ನುಚ್ಚು ಅಕ್ಕಿಯ ಮಾರಾಟದಿಂದ ಹೆಚ್ಚುವರಿ ಆದಾಯವು ಸೃಷ್ಟಿಯಾಗಲಿದ್ದು, ಇದು ಸರ್ಕಾರದ ಮೇಲಿರುವ ಆಹಾರ ಸಬ್ಸಿಡಿಯ ಹೊರೆಯನ್ನು ಮತ್ತಷ್ಟು ತಗ್ಗಿಸಲು ನೆರವಾಗಲಿದೆ.

ಪ್ರಾಯೋಗಿಕ ಅನುಷ್ಠಾನ

ಹರಿಯಾಣ, ಆಂಧ್ರಪ್ರದೇಶ, ಪಂಜಾಬ್, ಒರಿಸ್ಸಾ, ತೆಲಂಗಾಣ ಮತ್ತು ಛತ್ತೀಸ್ ಗಢದಂತಹ ವಿವಿಧ ರಾಜ್ಯಗಳಲ್ಲಿ ಪ್ರಾಯೋಗಿಕ ಅನುಷ್ಠಾನದ ಮೂಲಕ ಈ ಪ್ರಸ್ತಾವನೆಯನ್ನು ಈಗಾಗಲೇ ಯಶಸ್ವಿಯಾಗಿ ಪರೀಕ್ಷಿಸಿ ದೃಢಪಡಿಸಲಾಗಿದೆ. ಬೃಹತ್ ಪ್ರಮಾಣದಲ್ಲಿ ಸುಧಾರಿತ-ಗುಣಮಟ್ಟದ ಅಕ್ಕಿಯನ್ನು ಉತ್ಪಾದಿಸುವ ಕಾರ್ಯಾಚರಣೆಯ ಕಾರ್ಯಸಾಧ್ಯತೆಯನ್ನು ಈ ಪ್ರಾಯೋಗಿಕ ಯೋಜನೆಯು ಸಾಬೀತುಪಡಿಸಿದೆ. ಸಚಿವ ಸಂಪುಟದ ಅನುಮೋದನೆಯ ನಂತರ, ಈ ಪ್ರಾಯೋಗಿಕ ಯೋಜನೆಯಡಿ ಉತ್ಪಾದಿಸಲಾದ ಸುಧಾರಿತ-ಗುಣಮಟ್ಟದ ಅಕ್ಕಿಯನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೂ ಪೂರೈಸಲಾಗುವುದು.

ಪಾರದರ್ಶಕತೆಯನ್ನು ಬಲಪಡಿಸುವುದು

ಪೂರೈಕೆ ಸರಪಳಿಯಾದ್ಯಂತ ಅಕ್ಕಿ ಎಲ್ಲಿಂದ ಎಲ್ಲಿಗೆ ಸರಬರಾಜು ಆಗುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಪತ್ತೆಹಚ್ಚಲು, ಅಕ್ಕಿ ಚೀಲಗಳಿಗೆ ಕ್ಯೂಆರ್-ಕೋಡ್ (QR-code) ಅಳವಡಿಸುವ ಉದ್ದೇಶವನ್ನು ಸಹ ಈ ಸುಧಾರಣಾ ಕ್ರಮವು ಹೊಂದಿದೆ. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಾಸ್ತಾನು ನಿರ್ವಹಣೆಯನ್ನು ಬಲಪಡಿಸುತ್ತದೆ ಹಾಗೂ ಯಾವುದೇ ರೀತಿಯ ಸೋರಿಕೆಯಾಗದಂತೆ ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ.

ಸರ್ಕಾರವು ಪ್ರತಿಯೊಂದು ಅರ್ಹ ಕುಟುಂಬಕ್ಕೂ ಆಹಾರ ಭದ್ರತೆಯನ್ನು ಒದಗಿಸುವುದನ್ನು ಖಚಿತಪಡಿಸಿದೆ. ಸುಧಾರಿತ ಗುಣಮಟ್ಟದೊಂದಿಗೆ ಆಹಾರ ಭದ್ರತೆಯನ್ನು ಸಾಧಿಸುವುದು ಇದರ ಮುಂದಿನ ಹೆಜ್ಜೆಯಾಗಿದೆ. ಈ ಐತಿಹಾಸಿಕ ನಿರ್ಧಾರವು ಬಡ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಘನತೆಯಿಂದ ಒದಗಿಸುವುದನ್ನು ಖಚಿತಪಡಿಸುತ್ತದೆ. ಇದರ ಜೊತೆಗೆ, ಆಹಾರ ಧಾನ್ಯ ನಿರ್ವಹಣೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತನ್ನು ಇದು ಸುಧಾರಿಸಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:36 pm, Thu, 2 July 26

Source link

Leave a Reply

Your email address will not be published. Required fields are marked *