ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತವರು ನೆಲದಲ್ಲಿ ಎದುರಿಸಿದ ಹೀನಾಯ ಸೋಲು ಕ್ರೀಡಾ ಜಗತ್ತನ್ನು ಬೆಚ್ಚಿಬೀಳಿಸಿದೆ. ಏಕೆಂದರೆ ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಾಬಲ್ಯ ಪದಗಳಿಗೆ ನಿಲುಕದ್ದು. ಅವರ ಸ್ವಂತ ನೆಲದಲ್ಲಿ ಅವರನ್ನು ಸೋಲಿಸುವುದು ಎಂತಹ ಬಲಿಷ್ಠ ತಂಡಕ್ಕೂ ದುಃಸ್ವಪ್ನ. ಹೀಗಿರುವಾಗ ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧದ ಐತಿಹಾಸಿಕ ಸೋಲು ಆಸೀಸ್ ತಂಡದ ಮಾಜಿ ನಾಯಕರನ್ನು ಮತ್ತು ಆಟಗಾರರನ್ನು ಕೆರಳಿಸಿದೆ. ರಿಕಿ ಪಾಂಟಿಂಗ್ ಮತ್ತು ಮ್ಯಾಥ್ಯೂ ಹೇಡನ್ ಅವರಂತಹ ಮಾಜಿ ಆಟಗಾರರು ಪ್ರಸ್ತುತ ತಂಡದ ಪ್ರದರ್ಶನವನ್ನು ಟೀಕಿಸಿದ್ದು, ಇಡೀ ತಂಡವನ್ನು ಸಂಪೂರ್ಣವಾಗಿ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಬಾಂಗ್ಲಾದೇಶ 9 ವಿಕೆಟ್‌ಗಳಿಂದ ಐತಿಹಾಸಿಕ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಈ ಗೆಲುವಿನೊಂದಿಗೆ, ಬಾಂಗ್ಲಾದೇಶ ತಂಡವು ಹೊಸ ಇತಿಹಾಸವನ್ನು ಬರೆದಿದ್ದು, ಆಸ್ಟ್ರೇಲಿಯಾದ ನೆಲದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ಮೊದಲ ಗೆಲುವು ಸಾಧಿಸಿದ ಮೊದಲ ಏಷ್ಯನ್ ತಂಡವೆಂಬ ದಾಖಲೆ ಬರೆದಿದೆ. ಬಾಂಗ್ಲಾದೇಶ ಕೇವಲ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ಇದು ಆಸೀಸ್ ತಂಡದ ಮಾಜಿ ಆಟಗಾರರನ್ನು ಕೆರಳಿಸಿದೆ.
ನಾಚಿಕೆಗೇಡಿನ ವಿಷಯ; ಪಾಂಟಿಂಗ್ ಫೈರ್
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ತವರು ಪ್ರೇಕ್ಷಕರ ಮುಂದೆ ದುರ್ಬಲ ತಂಡಗಳ ವಿರುದ್ಧದ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಆಸ್ಟ್ರೇಲಿಯಾ ಕ್ರಿಕೆಟ್‌ಗೆ ‘ದೊಡ್ಡ ಅವಮಾನ’ ಎಂದು ಬಣ್ಣಿಸಿರುವ ಅವರು ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡದ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ ಮತ್ತು ತಂಡದಲ್ಲಿ ತಕ್ಷಣವೇ ಬದಲಾವಣೆಗಳನ್ನು ಮಾಡಬೇಕಾಗಿದೆ. ಆಟಗಾರರನ್ನು ಕೈಬಿಡುವ ಅಭ್ಯಾಸವನ್ನು ನಾನು ಸಾಮಾನ್ಯವಾಗಿ ವಿರೋಧಿಸುತ್ತೇನೆ.
ಏಕೆಂದರೆ ಒಬ್ಬ ನಾಯಕನಾಗಿ, ತಂಡವನ್ನು ಒಂದು ತಂಡವಾಗಿ ಮುನ್ನಡೆಸುವುದು ನನ್ನ ಆದ್ಯತೆಯಾಗಿದೆ. ಪರಿಸ್ಥಿತಿ ಸಂಪೂರ್ಣವಾಗಿ ಕೈ ಮೀರುವವರೆಗೆ ಆಟಗಾರರನ್ನು ಕೈಬಿಡಲು ನಾನು ಬಯಸುವುದಿಲ್ಲ. ಆದರೆ ಡಾರ್ವಿನ್ ಟೆಸ್ಟ್‌ಗೆ ಮುನ್ನ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮತ್ತು ನಂಬರ್ 3 ಸ್ಥಾನಗಳಲ್ಲಿ ಬದಲಾವಣೆ ಮಾಡುವುದರಿಂದ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ. ಇತ್ತೀಚಿನ ಸೋಲಿನ ನಂತರ ತಂಡದಲ್ಲಿನ ಬದಲಾವಣೆಯನ್ನು ಇನ್ನು ಮುಂದೆ ಮುಂದೂಡಬಾರದು ಎಂದು ಪಾಂಟಿಂಗ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಎಚ್ಚರಿಕೆ ನೀಡಿದ್ದಾರೆ.
ಬ್ಯಾಟಿಂಗ್ ಕ್ರಮಾಂಕವನ್ನೇ ಬದಲಾಯಿಸಬೇಕು
ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಕೂಡ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಭರವಸೆ ತೋರಿಸುತ್ತಿರುವ ಯುವ ಆಟಗಾರರಾದ ಸ್ಯಾಮ್ ಕಾನ್ಸ್ಟಸ್ ಮತ್ತು ಮ್ಯಾಟ್ ವ್ರೆನ್‌ಶಾ ಅವರಿಗೆ ಅಂತಿಮ ತಂಡದಲ್ಲಿ ತಕ್ಷಣ ಅವಕಾಶ ನೀಡಬೇಕು. ಪ್ರಸ್ತುತ ಬ್ಯಾಟಿಂಗ್ ಲೈನ್‌ಅಪ್ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಡ್ಯಾಶಿಂಗ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಓಪನರ್ ಆಗಿ ಕಳುಹಿಸುವುದು ಸರಿಯಾದ ನಿರ್ಧಾರವಲ್ಲ. ಅವರು ಐದನೇ ಸ್ಥಾನಕ್ಕೆ ಸೂಕ್ತರು. ಅದೇ ಸಮಯದಲ್ಲಿ, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರನ್ನು ಐದನೇ ಸ್ಥಾನದಲ್ಲಿ ಆಡಿಸುವುದು ತನಗೆ ಇಷ್ಟವಿಲ್ಲ ಎಂದಿದ್ದಾರೆ.