
ಬೆಂಗಳೂರು, ಏಪ್ರಿಲ್ 10: ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶ (2nd PUC result) ಪ್ರಕಟವಾಗಿದೆ. ಹಲವಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 600ಕ್ಕೆ 600 ಅಂಕವನ್ನೂ ಪಡೆದವರಿದ್ದಾರೆ. ಆದರೆ ಕರ್ನಾಟಕ ಸರ್ಕಾರದ ಅಧಿಕೃತ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅಂಕಪಟ್ಟಿಯಲ್ಲಿಯೇ ಗಂಭೀರ ಲೋಪವೊಂದು ಕಂಡುಬಂದಿದೆ. 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ನೀಡಿದ ಬೋರ್ಡ್ನ ಎಡವಟ್ಟು ಬೆಳಕಿಗೆ ಬಂದಿದೆ.
ಆರೂ ವಿಷಯಗಳಲ್ಲೂ 100ಕ್ಕೂ ಹೆಚ್ಚು ಅಂಕ!
ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಕೆಲ ವಿದ್ಯಾರ್ಥಿಗಳು ಈ ವರ್ಷ ಮರು ಪರೀಕ್ಷೆ ಬರೆದಿದ್ದರು. ಈ ವಿದ್ಯಾರ್ಥಿಗಳ ಫಲಿತಾಂಶವೂ ನಿನ್ನೆ ಪ್ರಕಟವಾಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ರೀತಿಯ ಎಡವಟ್ಟು ನಡೆದಿರುವುದು ಮುಜುಗರ ತಂದಿದೆ. ಕೆಲ ವಿದ್ಯಾರ್ಥಿಗಳಿಗೆ ಆರು ವಿಷಯಗಳಲ್ಲೂ 100ಕ್ಕೂ ಹೆಚ್ಚು ಅಂಕಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್! ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿಯಾಗಿದ್ದು ಹೇಗೆ?
ಡಿಜಿ ಲಾಕರ್‌ನಲ್ಲಿ ಸರಿಯಾಗೇ ಇದೆ ರಿಸಲ್ಟ್!
Karresults.nic.in ವೆಬ್‌ಸೈಟ್‌ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಮಾತ್ರ ಈ ಲೋಪ ಕಾಣಿಸಿದೆ. ಆದರೆ ಡಿಜಿ ಲಾಕರ್‌ನಲ್ಲಿ ಲಭ್ಯವಿರುವ ಅದೇ ವಿದ್ಯಾರ್ಥಿಗಳ ಅಧಿಕೃತ ಅಂಕಪಟ್ಟಿಯಲ್ಲಿ ಅಂಕಗಳು ಸರಿಯಾಗಿರುವುದು ಗಮನಾರ್ಹವಾಗಿದೆ. ಇದರಿಂದ ವೆಬ್‌ಸೈಟ್ ಡೇಟಾ ಅಪ್‌ಲೋಡ್ ವೇಳೆ ತಾಂತ್ರಿಕ ದೋಷ ಸಂಭವಿಸಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಎಡವಟ್ಟಿನಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿದ್ದು, ಫಲಿತಾಂಶದ ನಿಖರತೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ