ಪ್ರಾತಿನಿಧಿಕ ಚಿತ್ರImage Credit source: timesofindia
ಬೆಂಗಳೂರು, ಏಪ್ರಿಲ್ 16: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ (2nd PUC Exam-2) ಅರ್ಜಿ ಸಲ್ಲಿಸಲು ಬಯಸುವ ಪುನರಾವರ್ತಿತ ಅಭ್ಯರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಗುಡ್ ನ್ಯೂಸ್ ನೀಡಿದೆ. ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಏಪ್ರಿಲ್ 18ರವರೆಗೆ ವಿಸ್ತರಿಸಿ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.
ತಾಂತ್ರಿಕ ತೊಂದರೆ
ಈ ಮೊದಲು ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನವಾಗಿತ್ತು. ಆದರೆ, ರಾಜ್ಯದ ಹಲವೆಡೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ತಾಂತ್ರಿಕ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ಅರ್ಜಿ ಸಲ್ಲಿಕೆಯ ಅವಧಿಯನ್ನು ಈಗ ಒಂದು ದಿನದ ಮಟ್ಟಿಗೆ ಅಂದರೆ ಏಪ್ರಿಲ್ 18ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಮರುನಿಗದಿ! ನೋಂದಣಿಗೆ ಏಪ್ರಿಲ್ 17ರವರೆಗೆ ಅವಕಾಶ
ಅರ್ಜಿ ಸಲ್ಲಿಸಲು ಬಾಕಿ ಇರುವ ವಿದ್ಯಾರ್ಥಿಗಳು ಈ ಕೂಡಲೇ ವಿಸ್ತರಿಸಿದ ಕಾಲಾವಧಿಯ ಸದುಪಯೋಗ ಪಡೆದುಕೊಳ್ಳಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಅಥವಾ ಆಯಾ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಬಹುದಾಗಿದೆ.
ಸುತ್ತೋಲೆಯಲ್ಲಿ ಏನಿದೆ?
2026ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನಾವರ್ತಿತ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 09 ರಿಂದ 17ರವರೆಗೆ ಆನ್ಲೈನ್ (http://tinyurl.com/mvp9k6es) ಮುಖಾಂತರ ಸಂಬಂಧಪಟ್ಟ ಕಾಲೇಜುಗಳಲ್ಲಿ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದನ್ನೂ ಓದಿ: 2nd PUC Exam 2 Time Table: ಫೇಲಾದ್ರೇನಂತೆ ಇನ್ನೊಂದು ಎಕ್ಸಾಮ್ ಟೈಮ್ ಟೇಬಲ್ ಇಲ್ಲಿದೆ ನೋಡಿ
ಈ ಸಂಬಂಧ ವಿದ್ಯಾರ್ಥಿ, ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸ್ತರಿಸುವಂತೆ ಮನವಿಗಳು ಬಂದಿದ್ದವು. ಹೀಗಾಗಿ 2026ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನಾವರ್ತಿತ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳುವ ಅಭ್ಯರ್ಥಿಗಳು ಆನ್ಲೈನ್, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಅಂತಿಮ ದಿನಾಂಕವನ್ನು ಏಪ್ರಿಲ್ 18ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.
ಮತ್ತಷ್ಟು ಶಿಕ್ಷಣದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.