ಮಂಗಳೂರು, ಜೂ,27: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಠ್ಠಲ್ ಗೌಡನಿಗೆ ಬೆಂಗಳೂರಿನ ನ್ಯಾಯಾಲಯವು ಬಂಧನ ವಾರಂಟ್ (Arrest Warrant) ಜಾರಿಗೊಳಿಸಿದೆ. ನ್ಯಾಯಾಂಗ ನಿಂದನೆ (Contempt of Court) ಪ್ರಕರಣದಡಿಯಲ್ಲಿ ಈ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಸದ್ಯ ವಿಠ್ಠಲ್ ಗೌಡ ಪತ್ತೆಗಾಗಿ ಪೊಲೀಸರು ಹಾಗೂ ಕೋರ್ಟ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಈ ಬಂಧನ ವಾರಂಟ್ ಅನ್ನು ಜಾರಿಗೊಳಿಸಿದೆ. ಜೂನ್ 8 ರಂದೇ ಈ ವಾರಂಟ್ ಜಾರಿಯಾಗಿದ್ದು, ಮುಂಬರುವ ಜೂನ್ 30 ರೊಳಗೆ ವಿಠ್ಠಲ್ ಗೌಡನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಲಾಗಿದೆ. ನ್ಯಾಯಾಲಯದ ಅರೆಸ್ಟ್ ವಾರಂಟ್ ಕೈಸೇರುತ್ತಿದ್ದಂತೆ ವಿಠ್ಠಲ್ ಗೌಡ ಕಾನೂನು ಕ್ರಮಕ್ಕೆ ಹೆದರಿ ತಲೆಮರೆಸಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಕೋರ್ಟ್ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಬೆಳ್ತಂಗಡಿ ಮತ್ತು ಧರ್ಮಸ್ಥಳ ಭಾಗದ ವಿವಿಧೆಡೆ ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ಶೋಧ ಕಾರ್ಯ ಚುರುಕುಗೊಳಿಸಿದೆ. ವಿಠ್ಠಲ್ ಗೌಡನ ಸ್ವಗೃಹ ಆತನ ಸಹೋದರಿ ಕುಸುಮಾವತಿ ಅವರ ನಿವಾಸ ಹಾಗೂ ಪ್ರಮುಖವಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿಯೂ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ:ಕೊಂಬುಚಾ ಜ್ಯೂಸ್ ಅನ್ನು ಬಿಯರ್ ಅಂದುಕೊಂಡು ಮಹಿಳೆಗೆ ಕಿರುಕುಳ: ಚಾಲಕನ ವಿರುದ್ಧ ಎಫ್ಐಆರ್!
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಅವಹೇಳನಕಾರಿ ಹಾಗೂ ಆಧಾರರಹಿತ ಹೇಳಿಕೆಗಳನ್ನು ನೀಡಬಾರದು ಎಂದು ಈ ಹಿಂದೆ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಆದರೆ, ವಿಠ್ಠಲ್ ಗೌಡ ನ್ಯಾಯಾಲಯದ ಅಧಿಕೃತ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸಿ, ನಿಯಮಾವಳಿಗಳನ್ನು ಗಾಳಿಗೆ ತೂರಿ ಮತ್ತೆ ಅವಹೇಳಕಾರಿ ಹೇಳಿಕೆಯನ್ನು ನೀಡುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅಡಿಯಲ್ಲಿ ಆತನನ್ನು ಬಂಧಿಸಿ ಜೂನ್ 30 ರೊಳಗೆ ಕೋರ್ಟ್ಗೆ ಒಪ್ಪಿಸುವಂತೆ ಖಡಕ್ ಆದೇಶ ಹೊರಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:55 pm, Sat, 27 June 26