ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಮೂರು ವಾರದ ಹಿಂದೆ ಬಿಡುಗಡೆ ಆಗಿದ್ದು ಹಿಟ್ ಎನಿಸಿಕೊಂಡಿದೆ. ಬಿಡುಗಡೆ ಆದ 18 ದಿನಗಳಲ್ಲಿ ಸುಮಾರು 350 ಕೋಟಿಗೂ ಹೆಚ್ಚು ಮೊತ್ತವನ್ನು ಈ ಸಿನಿಮಾ ಗಳಿಕೆ ಮಾಡಿದೆ. ‘ಆರ್ಆರ್ಆರ್’ ಬಳಿಕ ಸತತ ಸೋಲಿನಿಂದ ಕಂಗೆಟ್ಟಿದ್ದ ನಟ ರಾಮ್ ಚರಣ್, ‘ಪೆದ್ದಿ’ ಸಿನಿಮಾ ಮೂಲಕ ಗೆಲುವು ಸಾಧಿಸಿದ್ದಾರೆ. ಆದರೆ ಇತ್ತೀಚೆಗೆ ರಾಮ್ ಚರಣ್, ತಮ್ಮ ಮಾತುಗಳಿಂದ ಟ್ರೋಲ್ಗೆ ಗುರಿ ಆಗುತ್ತಿದ್ದಾರೆ. ‘ಪೆದ್ದಿ’ ಪ್ರಚಾರದ ಸಮಯದಲ್ಲಿ ಜಸ್ಪೀತ್ ಬುಮ್ರಾ ಅವರನ್ನು ಫುಟ್ಬಾಲರ್ ಎಂದು ಹೇಳಿ ಟ್ರೋಲ್ ಆಗಿದ್ದರು. ಈಗ ‘ಧುರಂಧರ್ 2’ ಸಿನಿಮಾ ಬಗ್ಗೆ ಮಾತನಾಡಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.
ಇತ್ತೀಚೆಗಷ್ಟೆ ನಟ ರಾಮ್ ಚರಣ್, ಮಾಧ್ಯಮವೊಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾಗಳ ಬಗ್ಗೆ, ಸಿನಿಮಾಗಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದರು. ಇದೇ ಸಂವಾದದಲ್ಲಿ ‘ಧುರಂಧರ್’ ಸಿನಿಮಾದ ಬಗ್ಗೆಯೂ ಚರ್ಚೆಯಾಯ್ತು, ಈ ವೇಳೆ ನಟ ರಾಮ್ ಚರಣ್, ‘ನಾನು ಕಳೆದ ವಾರವಷ್ಟೆ ಒಟಿಟಿಯಲ್ಲಿ ‘ಧುರಂಧರ್’ ಸಿನಿಮಾ ನೋಡಿದೆ. ಅದೊಂದು ಬಹಳ ಅದ್ಭುತವಾದ ಸಿನಿಮಾ, ಆ ಸಿನಿಮಾನಲ್ಲಿ, ಎಲ್ಲ ವಿಷಯಗಳು ಸರಿಯಾಗಿ ಒದಗಿ ಬಂದಿವೆ’ ಎಂದರು.
ಆದರೆ ರಾಮ್ ಚರಣ್, ‘ಧುರಂಧರ್ 2’ ಸಿನಿಮಾ ಬಿಡುಗಡೆ ಆದ ಮರುದಿನವೇ (ಮಾರ್ಚ್ 20) ಸಿನಿಮಾ ಬಗ್ಗೆ ಟ್ವೀಟ್ ಮಾಡಿ, ಸಿನಿಮಾವನ್ನು ಕೊಂಡಾಡಿದ್ದರು. ಖುದ್ದು ಸಿನಿಮಾ ನೋಡಿ ಬರೆದವರಂತೆ ವಿಮರ್ಶೆ ಸಹ ಬರೆದಿದ್ದರು. ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರ ಕ್ರಿಯಾಶೀಲತೆಯನ್ನು, ರಣ್ವೀರ್ ಸಿಂಗ್ ಅವರ ನಟನೆಯನ್ನು ಕೊಂಡಾಡಿದ್ದರು. ರಾಮ್ ಚರಣ್ ಟ್ವೀಟ್ ನೋಡಿದವರು, ನಟ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ ಎಂದುಕೊಂಡಿದ್ದರು. ಆದರೆ ಈಗ ರಾಮ್ ಚರಣ್, ತಾವು ಇತ್ತೀಚೆಗಷ್ಟೆ ಒಟಿಟಿಯಲ್ಲಿ ಸಿನಿಮಾ ನೋಡಿದೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ರಾಮ್ ಚರಣ್ ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡೋದು ಯಾವಾಗ?
ಆದರೆ ರಾಮ್ ಚರಣ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಬೆಂಬಲಕ್ಕೆ ಬಂದಿದ್ದು, ‘ರಾಮ್ ಚರಣ್ ಅವರು ಎರಡನೇ ಬಾರಿಗೆ ಒಟಿಟಿಯಲ್ಲಿ ನೋಡಿದ್ದಾರೆ. ಹಾಗಾಗಿ ಅವರು ಸಂವಾದದಲ್ಲಿ ಹಾಗೆ ಹೇಳಿದ್ದಾರೆ ಎಂದಿದ್ದಾರೆ. ಏನೇ ಆಗಲಿ, ರಾಮ್ ಚರಣ್ ಮತ್ತೊಮ್ಮೆ ತಮ್ಮ ಮಾತಿನಿಂದಾಗಿ ಟ್ರೋಲ್ ಆಗುತ್ತಿದ್ದಾರೆ.
ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ರಾಮ್ ಚರಣ್ ಅವರು ಸುಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ. ಇನ್ನೆರಡು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸುಕುಮಾರ್ ಜೊತೆಗೆ ಇದು ಅವರ ಎರಡನೇ ಸಿನಿಮಾ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ