‘ಧುರಂಧರ್’ ಹಾಗೂ ‘ಧುರಂದರ್ 2’ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಮೂಡಿದೆ. ಅವರ ನಟನೆಯ ‘ಡಾನ್ 3’ ಸಿನಿಮಾ ಸೆಟ್ಟೇರುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಅವರ ‘ಪ್ರಳಯ್’ ಚಿತ್ರದ ಬಗ್ಗೆಯೂ ನಿರೀಕ್ಷೆ ಮೂಡಿದೆ. ಈ ಸಿನಿಮಾ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ 2026ರಲ್ಲಿ ಶೂಟಿಂಗ್ ಆರಂಭಿಸಲಿದೆ ಎಂಬ ಹೊಸ ಮಾಹಿತಿ ಹೊರಬಿದ್ದಿದೆ.
‘ಧುರಂಧರ್’ ಫ್ರಾಂಚೈಸಿಯ ಯಶಸ್ಸಿನ ನಂತರ ರಣವೀರ್ ಸಿಂಗ್ ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎನ್ನುವ ಕುತೂಹಲ ಇತ್ತು. ಹೀಗಿರುವಾಗಲೇ ಅವರು ನಿರ್ದೇಶಕ ಜೈ ಮೆಹ್ತಾ ಅವರ ‘ಪ್ರಳಯ್’ ಸಿನಿಮಾದಲ್ಲಿ ನಟಿಸೋ ಮಾಹಿತಿ ಹೊರ ಬಿತ್ತು. ಆದರೆ, ನಿರ್ದೇಶಕ ಹಾಗೂ ರಣವೀರ್ ಸಿಂಗ್ ಮಧ್ಯೆ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತಿದೆ. ಇದರಿಂದ ಸಿನಿಮಾ ಸ್ಥಗಿತಗೊಂಡಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ಈ ಸುದ್ದಿಯನ್ನು ಚಿತ್ರತಂಡದ ಆಪ್ತ ಮೂಲಗಳು ನಿರಾಕರಿಸಿವೆ. ‘ಪ್ರಳಯ್’ ಚಿತ್ರದ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸುಳ್ಳು ಎಂದು ಹೇಳಲಾಗಿದೆ. ರಣವೀರ್ ಮತ್ತು ಜೈ ನಿರಂತರವಾಗಿ ಸ್ಕ್ರಿಪ್ಟ್ ಚರ್ಚೆ ನಡೆಸಿ ಅದನ್ನು ಫೈನಲ್ ಮಾಡಿದ್ದಾರೆ. ಸಿನಿಮಾ ಈಗಾಗಲೇ ಪ್ರೀ-ಪ್ರೊಡಕ್ಷನ್ ಹಂತಕ್ಕೆ ತಲುಪಿದೆಎಂದು ಮೂಲಗಳು ತಿಳಿಸಿವೆ.
‘ಪ್ರಳಯ್’ ಭಾರತೀಯ ಚಿತ್ರರಂಗದಲ್ಲಿ ಸಿದ್ಧವಾಗಲಿರುವ ದುಬಾರಿ ಜಾಂಬಿ ಶೈಲಿಯ ಸಿನಿಮಾ ಆಗಲಿದೆ. ಹಿಂದಿ ಚಿತ್ರರಂಗದಲ್ಲಿ ಈ ಮಟ್ಟದ ಬೃಹತ್ ಜಾಂಬಿ ಸಿನಿಮಾ ಇದುವರೆಗೆ ಬಂದಿಲ್ಲ. ಈ ಚಿತ್ರವು ಸುಮಾರು 300 ಕೋಟಿ ರೂಪಾಯಿಗಳ ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದ್ದು, ಬಾಲಿವುಡ್ನ ಅತ್ಯಂತ ದುಬಾರಿ ಸಿನಿಮಾಗಳ ಪಟ್ಟಿಗೆ ಸೇರಲಿದೆ.
ಇದನ್ನೂ ಓದಿ: ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ
ನಿರ್ದೇಶಕ ಜೈ ಮೆಹ್ತಾ ಮತ್ತು ‘ಲೂಟೇರೆ’ ಖ್ಯಾತಿಯ ವಿಶಾಲ್ ಕಪೂರ್ ಈ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರಕ್ಕಾಗಿ ರಣವೀರ್ ಸಿಂಗ್ ವಿಶೇಷ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2027ಕ್ಕೆ ಸಿನಿಮಾ ತೆರೆಗೆ ಬರಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.