ಚಿತ್ರರಂಗದಲ್ಲಿ ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವುದು ಹೊಸದೇನಲ್ಲ. ಪ್ರತಿ ಬಾರಿ ಹಬ್ಬಗಳ ಸಂದರ್ಭದಲ್ಲಿ ಅಥವಾ ಯಾವುದೇ ಮುಖ್ಯವಾದ ದಿನಗಳಂದು ಈ ಬಾಕ್ಸ್ ಆಫೀಸ್ ಕ್ಲ್ಯಾಷ್ ಆಗುತ್ತಲೇ ಇರುತ್ತವೆ. ಆದರೆ, ಈ ಬಾರಿ ಇಬ್ಬರು ಸ್ಟಾರ್ ನಟರ ಚಿತ್ರಗಳು ಮುಖಾಮುಖಿಯಾಗುತ್ತಿರುವುದು ಸಿನಿಮಾ ಪಂಡಿತರಲ್ಲಿ ಆತಂಕ ಮೂಡಿಸಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಮತ್ತು ಬಾಲಿವುಡ್ನ ಬಹುತಾರಾಗಣದ ‘ಧುರಂಧರ್ 2’ ಚಿತ್ರಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ. ಈ ಬಗ್ಗೆ ‘ಧುರಂಧರ್ 2’ ಚಿತ್ರದ ನಿರ್ದೇಶಕರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
‘ಕಾಂಟೆ’ ‘ಶೂಟೌಟ್ ಅಟ್ ವಡಾಲ’, ‘ಜಂಗ್’ ಸೇರಿದಂತೆ ಹಲವು ಬಾಲಿವುಡ್ ಹಿಟ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಸಂಜಯ್ ಗುಪ್ತಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ‘ಟಾಕ್ಸಿಕ್ ಮತ್ತು ಧುರಂಧರ್ 2’ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದನ್ನು ಖಂಡಿಸಿದ್ದಾರೆ. ಇದು ಕೆಟ್ಟ ಬೆಳವಣಿಗೆ ಎಂದಿದ್ದಾರೆ. ಅಲ್ಲದೆ ಈ ಎರಡು ಸಿನಿಮಾಗಳಿಂದ ಬೇರೆ ಸಿನಿಮಾಗಳಿಗೆ ಭಾರಿ ದೊಡ್ಡ ಹೊಡೆತ ಬೀಳಲಿದೆ ಎಂದಿದ್ದಾರೆ.
‘ಜನರ ಬಳಿ ಎರಡು ದೊಡ್ಡ ಸಿನಿಮಾಗಳನ್ನು ಏಕಕಾಲಕ್ಕೆ ನೋಡುವಷ್ಟು ಹಣವಿಲ್ಲ. ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸಿನಿಮಾ ವೀಕ್ಷಣೆ ಎಂಬುದು ದುಬಾರಿ ಹವ್ಯಾಸವಾಗಿದೆ. ಒಂದೇ ವಾರದಲ್ಲಿ ಎರಡು ಬೃಹತ್ ಚಿತ್ರಗಳು ಬಂದಾಗ, ಪ್ರೇಕ್ಷಕರು ಯಾವುದಾದರೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಇದರಿಂದ ಒಂದು ಚಿತ್ರದ ಲಾಭವನ್ನು ಇನ್ನೊಂದು ಚಿತ್ರ ಕಬಳಿಸಿದಂತಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ಮ್ಯೂಸಿಕ್ ಕಂಪೋಸರ್ ರವಿ ಬಸ್ರೂರ್ಗೆ 35 ಲಕ್ಷದ ವಾಚ್ ಗಿಫ್ಟ್ ಕೊಟ್ಟ ತೆಲುಗು ನಟ
‘ಕೇವಲ ಟಿಕೆಟ್ ದರವಷ್ಟೇ ಅಲ್ಲದೆ, ಮಲ್ಟಿಪ್ಲೆಕ್ಸ್ಗಳಲ್ಲಿ ಪಾಪ್ಕಾರ್ನ್, ಕೂಲ್ ಡ್ರಿಂಕ್ಸ್ ಮತ್ತು ಪಾರ್ಕಿಂಗ್ ಸೇರಿ ಒಂದು ಕುಟುಂಬಕ್ಕೆ ಸಿನಿಮಾ ನೋಡುವುದೆಂದರೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ‘ಟಾಕ್ಸಿಕ್’ ನಂತಹ ಪ್ಯಾನ್ ಇಂಡಿಯಾ ಕ್ರೇಜ್ ಇರುವ ಸಿನಿಮಾ ಮತ್ತು ‘ಧುರಂಧರ್ 2’ ನಂತಹ ಮಾಸ್ ಸಿನಿಮಾ ಒಟ್ಟಿಗೆ ಬರುವುದು ಚಿತ್ರಮಂದಿರಗಳ ಹಂಚಿಕೆ ಹಾಗೂ ಕಲೆಕ್ಷನ್ ಮೇಲೆ ನೇರ ಪರಿಣಾಮ ಬೀರಲಿದೆ ಎಂದಿದ್ದಾರೆ ಅವರು.
‘ಕೆಜಿಎಫ್’ ನಂತರ ಯಶ್ ಅವರ ಮಾರ್ಕೆಟ್ ದೇಶಾದ್ಯಂತ ಹರಡಿದೆ. ಹೀಗಾಗಿ ‘ಟಾಕ್ಸಿಕ್’ ಚಿತ್ರದ ಮೇಲೆ ಇಡೀ ಭಾರತದ ಕಣ್ಣಿದೆ. ಇತ್ತ ‘ಧುರಂಧರ್ 2’ ಕೂಡ ದೊಡ್ಡ ತಾರಾಗಣವನ್ನು ಹೊಂದಿದ್ದು, ಬಾಲಿವುಡ್ನಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಈ ಎರಡು ಶಕ್ತಿಶಾಲಿ ಸಿನಿಮಾಗಳ ನಡುವಿನ ಪೈಪೋಟಿ ಯಾರಿಗೆ ಪ್ಲಸ್ ಆಗಲಿದೆ ಮತ್ತು ಯಾರಿಗೆ ಮೈನಸ್ ಆಗಲಿದೆ ಎಂಬುದು ಈಗ ಕುತೂಹಲದ ವಿಷಯ. ಈ ಹಿಂದೆ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳ ಸಮಯದಲ್ಲಿ ಬಾಲಿವುಡ್ ಸಿನಿಮಾಗಳ ಎದುರೇ ಯಶ್ ಗೆದ್ದಿದ್ದರು. ಈಗ ‘ಟಾಕ್ಸಿಕ್’ ಸಮಯದಲ್ಲಿಯೂ ಸಹ ಅವರಿಗೆ ಬಾಲಿವುಡ್ನ ದೊಡ್ಡ ಸಿನಿಮಾ ಎದುರಾಗಿದೆ. ಈ ಬಾರಿ ಗೆಲುವು ಯಾರದ್ದಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ. ‘ಧುರಂಧರ್ 2’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ