ಬಾಲಿವುಡ್ ಮತ್ತು ಕ್ರಿಕೆಟ್ ಲೋಕದ ಹಳೆಯ ವದಂತಿಗಳಿಗೆ ಇದೀಗ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ (Brett Lee) ಪೂರ್ಣವಿರಾಮ ಇಟ್ಟಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ಜೊತೆಗಿನ ತಮ್ಮ ಲಿಂಕ್-ಅಪ್ ವದಂತಿಗಳ ಕುರಿತು ಬ್ರೆಟ್ ಲೀ ಇತ್ತೀಚಿನ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅಭಿಮಾನಿಗಳು ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಪ್ರೇಮ ಪುಕಾರುಗಳನ್ನು ತಳ್ಳಿಹಾಕಿದ ಬ್ರೆಟ್ ಲೀ, ‘ನಾನು ಯಾವುದೇ ಬಾಲಿವುಡ್ ನಟಿಯೊಂದಿಗೂ ಡೇಟಿಂಗ್ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರೀತಿ ಜಿಂಟಾ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ, ‘ಪ್ರೀತಿ ಜಿಂಟಾ ಮತ್ತು ನಾನು ಎಂದಿಗೂ ಉತ್ತಮ ಸ್ನೇಹಿತರು. ಅವರು ಪಂಜಾಬ್ ಕಿಂಗ್ಸ್ ತಂಡದ ಒಡತಿಯಾಗಿದ್ದರು. ಪ್ರೀತಿ ಅತ್ಯಂತ ಬುದ್ಧಿವಂತ ಮಹಿಳೆ ಹಾಗೂ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಇಂತಹ ಸುಳ್ಳು ಸುದ್ದಿಗಳು ನನಗೆ ಎಂದಿಗೂ ತೊಂದರೆ ನೀಡಲಿಲ್ಲ. ಏಕೆಂದರೆ ನನಗಾಗಲಿ ಅವರಿಗಾಗಲಿ ಸತ್ಯ ಏನೆಂದು ತಿಳಿದಿತ್ತು’ ಎಂದು ಹೇಳಿದ್ದಾರೆ.
2008-2011ರ ನಡುವೆ ಹರಡಿದ್ದ ವದಂತಿಗಳು:
ಐಪಿಎಲ್ ಆರಂಭಿಕ ಆವೃತ್ತಿಗಳಲ್ಲಿ ಬ್ರೆಟ್ ಲೀ ಪಂಜಾಬ್ ಕಿಂಗ್ಸ್ (ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್) ಪರ ಆಡುತ್ತಿದ್ದಾಗ, ಪ್ರೀತಿ ಜಿಂಟಾ ಹಾಗೂ ಅವರ ನಡುವೆ ಅಫೇರ್ ಇದೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಮುಂಬೈನ ಹೋಟೆಲ್ ಒಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಈ ವದಂತಿ ಮತ್ತಷ್ಟು ಹೆಚ್ಚಾಗಿತ್ತು. ಆ ಸಂದರ್ಭದಲ್ಲೇ ಪ್ರೀತಿ ಜಿಂಟಾ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿ, ಬ್ರೆಟ್ ಲೀ ಅವರು ತಮ್ಮ ಆತ್ಮೀಯ ಗೆಳೆಯ ಮಾತ್ರ ಎಂದು ಬರೆದುಕೊಂಡಿದ್ದರು.
ಬ್ರೆಟ್ ಲೀ ವೈಯಕ್ತಿಕ ಜೀವನ:
ಬ್ರೆಟ್ ಲೀ 2006ರಲ್ಲಿ ಎಲಿಜಬೆತ್ ಕೆಂಪ್ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ 2009ರಲ್ಲಿ ಇಬ್ಬರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು. ತದನಂತರ, 2014ರಲ್ಲಿ ಲಾನಾ ಆಂಡರ್ಸನ್ ಅವರನ್ನು ಬ್ರೆಟ್ ಲೀ ಎರಡನೇ ಮದುವೆಯಾದರು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರೀತಿ ಜಿಂಟಾ ಮತ್ತು ಬ್ರೆಟ್ ಲೀ ಬಗ್ಗೆ ವದಂತಿಗಳು ಹರಡುತ್ತಿದ್ದ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲೀಕ ಹಾಗೂ ಉದ್ಯಮಿ ನೆಸ್ ವಾಡಿಯಾ ಅವರೊಂದಿಗೆ ಪ್ರೀತಿ ಜಿಂಟಾ ಅವರ ಬ್ರೇಕಪ್ ಮತ್ತು ಎಂಗೇಜ್ಮೆಂಟ್ ವದಂತಿಗಳು ಸಖತ್ ಸುದ್ದಿ ಮಾಡಿದ್ದವು. ಅಂತಿಮವಾಗಿ 2016ರಲ್ಲಿ ಲಾಸ್ ಏಂಜಲೀಸ್ನಲ್ಲಿ ಜೀನ್ ಗುಡ್ಎನಫ್ ಅವರನ್ನು ಮದುವೆಯಾದ ಪ್ರೀತಿ ಜಿಂಟಾ, 2021ರಲ್ಲಿ ಬಾಡಿಗೆ ತಾಯ್ತನದ (ಸರೋಗಸಿ) ಮೂಲಕ ಅವಳಿ ಮಕ್ಕಳನ್ನು ಪಡೆದರು.
ಇದನ್ನೂ ಓದಿ: ಗೂಗಲ್, ಫೇಸ್ಬುಕ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಪ್ರೀತಿ ಜಿಂಟಾ
ಪ್ರೀತಿ ಜಿಂಟಾ ಮುಂಬರುವ ಸಿನಿಮಾಗಳು:
ಸಿನಿಮಾಗಳಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ನಟಿ ಪ್ರೀತಿ ಜಿಂಟಾ, ಪ್ರಸ್ತುತ ರಾಜ್ಕುಮಾರ್ ಸಂತೋಷಿ ನಿರ್ದೇಶನದ, ಸನ್ನಿ ಡಿಯೋಲ್ ಹಾಗೂ ಶಬಾನಾ ಅಜ್ಮಿ ಅಭಿನಯದ ‘ಬಟ್ವಾರಾ 1947’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಕುನಾಲ್ ಖೇಮು ನಿರ್ದೇಶನದ ‘ವೈಬ್’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.