Headlines

ನಟ ರವಿ ಮೋಹನ್ ಮನೆಯಲ್ಲಿ ಕಳ್ಳತನ: ಕಾರು ಚಾಲಕನ ಬಂಧನ; ವಜ್ರದ ಸರಕ್ಕಾಗಿ ಹುಡುಕಾಟ – Kannada News | Tamil Actor Ravi Mohan House Theft Driver Arrested in Chennai

ಚೆನ್ನೈ: ಖ್ಯಾತ ತಮಿಳು ನಟ ರವಿ ಮೋಹನ್ (ಜಯಂ ರವಿ) ಅವರ ಚೆನ್ನೈನ ನಿವಾಸದಲ್ಲಿ ನಡೆದಿದ್ದ ಕಳ್ಳತನ (Theft) ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಮೋಹನ್ (Ravi Mohan) ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 2.5 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ನಾಪತ್ತೆಯಾಗಿರುವ 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರಕ್ಕಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಚೆನ್ನೈನ ಇಂಜಂಬಾಕ್ಕಂನಲ್ಲಿರುವ ನಟ ರವಿ ಮೋಹನ್ ಅವರ ನಿವಾಸದಲ್ಲಿ ಜೂನ್ 22ರಂದು ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿದ್ದವು. ಈ ಕುರಿತು ನಟನ ಮ್ಯಾನೇಜರ್ ನೀಲಾಂಕರೈ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ಇದಕ್ಕೂ ಮುನ್ನ, ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು.

ನಟನ ಮನೆಗೆ ಧಾವಿಸಿದ್ದ ಪೊಲೀಸರು:

ಮನೆ ಕೆಲಸದವರ ಮೇಲೆ ಶಂಕೆ ಇದ್ದರಿಂದ ಅವರನ್ನು ಜಯಂ ರವಿ ನಿವಾಸದಲ್ಲೇ ತಡೆದುಹಿಡಿದು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಯಲ್ಲಿದ್ದ ಇಬ್ಬರು ಮಹಿಳಾ ಕೆಲಸಗಾರರು ಮತ್ತು ಒಬ್ಬ ಬಾಲಕನನ್ನು ಮುಕ್ತಗೊಳಿಸಿದರು. ಅಲ್ಲದೆ, ಯಾವುದೇ ಕಳ್ಳತನದ ಆರೋಪವಿದ್ದರೂ ಕಾನೂನುಬದ್ಧವಾಗಿ ದೂರು ದಾಖಲಿಸಬೇಕೇ ವಿನಃ ಖಾಸಗಿಯಾಗಿ ಯಾರನ್ನೂ ಬಂಧಿಸಿ ವಿಚಾರಣೆ ನಡೆಸಬಾರದು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಮ್ಯಾನೇಜರ್ ಮೂಲಕ 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಮತ್ತು ನಗದು ಕಳವಾಗಿರುವ ಬಗ್ಗೆ ದೂರು ದಾಖಲಿಸಲಾಯಿತು.

ಜಯಂ ರವಿ ಕಾರು ಚಾಲಕನಿಂದಲೇ ಕೃತ್ಯ:

ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಚಾಲಕರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಕಳೆದ ಆರು ತಿಂಗಳಿನಿಂದ ರವಿ ಮೋಹನ್ ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬಾತನ ಮೇಲೆ ಪೊಲೀಸರಿಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ತಾನೇ ಲಾಕರ್ ಓಪನ್ ಮಾಡಿ ಹಣ ಕದ್ದಿರುವುದಾಗಿ ಆರೋಪಿ ಚಾಲಕ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಮನೆ ಕೆಲಸದ ಮಹಿಳೆಯರನ್ನು ಕೂಡಿಹಾಕಿದ ನಟ ರವಿ ಮೋಹನ್? ಹೊಸ ವಿವಾದ

ವಜ್ರದ ಹಾರಕ್ಕಾಗಿ ಮುಂದುವರಿದ ಹುಡುಕಾಟ:

ಸದ್ಯ ಆರೋಪಿಯಿಂದ ಕದಿಯಲಾಗಿದ್ದ ಹಣವನ್ನು ರಿಕವರಿ ಮಾಡಲಾಗಿದ್ದು, ಅದನ್ನು ನಟನಿಗೆ ಹಸ್ತಾಂತರಿಸಲಾಗಿದೆ. ಆದರೆ, ದೂರಿನಲ್ಲಿ ಉಲ್ಲೇಖಿಸಲಾಗಿರುವ 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ನೆಕ್ಲೇಸ್ ಇನ್ನೂ ಪತ್ತೆಯಾಗಿಲ್ಲ. ಆರೋಪಿ ರಾಜೇಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *