Headlines

ನಮ್ಮ ಮೆಟ್ರೋ ಸರಣಿ ವೈಫಲ್ಯ: ತೇಜಸ್ವಿ ಸೂರ್ಯ ದೂರಿನ ಬೆನ್ನಲ್ಲೇ ಕೇಂದ್ರದಿಂದ ತನಿಖೆಗೆ ಆದೇಶ! – Kannada News | Metro Service Disruptions: Rail Safety Commissioner Directs BMRCL to Submit Probe Report

ತೇಜಸ್ವಿ ಸೂರ್ಯImage Credit source: Tejaswi Surya X account

ಬೆಂಗಳೂರು, ಜುಲೈ 01: ನಮ್ಮ ಮೆಟ್ರೋ ರೈಲು ಸೇವೆಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ವ್ಯತ್ಯಯಗಳ ಕುರಿತು ತನಿಖೆ ನಡೆಸಿ, ಕೈಗೊಂಡಿರುವ ಪರಿಹಾರ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು (CCRS) ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಕಡಕ್ ನಿರ್ದೇಶನ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಕಳೆದ ಮೂರು ವರ್ಷಗಳಲ್ಲಿ ನಡೆದಿದ್ದ 20 ಸಮಸ್ಯೆಗಳ ಬಗ್ಗೆ ದಾಖಲೆ ಸಮೇತ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಬಿದ್ದಿದ್ದು, ಈ ಬಗ್ಗೆ ಸೂರ್ಯ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

3 ವರ್ಷಗಳ ಮೆಟ್ರೋ ಸರಣಿ ವ್ಯತ್ಯಯಗಳ ತನಿಖೆಗೆ ಆದೇಶ

ಜೂನ್ 23 ರಂದು ನಮ್ಮ ಮೆಟ್ರೋದ ಪರ್ಪಲ್ ಲೈನ್‌ನಲ್ಲಿ (ನೇರಳೆ ಮಾರ್ಗ) ಉಂಟಾಗಿದ್ದ ತಾಂತ್ರಿಕ ದೋಷ ಹಾಗೂ ಸೇವಾ ವ್ಯತ್ಯಯದ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಜೂನ್ 25 ರಂದು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದರು.

ಈ ದೂರಿಗೆ ಅಧಿಕೃತವಾಗಿ ಉತ್ತರಿಸಿರುವ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಾದ ಜನಕ್ ಕುಮಾರ್ ಗರ್ಗ್ ಅವರು, ಜೂನ್ 23ರ ಘಟನೆ ಮಾತ್ರವಲ್ಲದೆ, ಕಳೆದ ಮೂರು ವರ್ಷಗಳಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಉಂಟಾಗಿರುವ ಎಲ್ಲಾ ಸರಣಿ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ (MD) ಸೂಚಿಸಿದ್ದಾರೆ. ಇದರೊಂದಿಗೆ ಮೆಟ್ರೋ ರೈಲ್ವೆ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ದಕ್ಷತೆಯ ಬಗ್ಗೆ ಆಡಿಟಿಂಗ್ ನಡೆಸಲು ಆದೇಶಿಸಲಾಗಿದೆ.

ಸಚಿವ ಕೃಷ್ಣಭೈರೇಗೌಡ ಅವರಿಗೆ ಟ್ಯಾಗ್

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರ ಪತ್ರವನ್ನು ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಈ ಪತ್ರವನ್ನು ಬಿಎಂಆರ್ಸಿಎಲ್ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಟ್ಯಾಗ್ ಮಾಡುವ ಮೂಲಕ ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

2024ರಿಂದೀಚೆಗೆ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 20 ಬಾರಿ ಸೇವಾ ವ್ಯತ್ಯಯಗಳು ವರದಿಯಾಗಿವೆ. ಇದು ವ್ಯವಸ್ಥಿತ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದು, ತಕ್ಷಣವೇ ಸರಿಪಡಿಸುವ ಕ್ರಮಗಳು ಅಗತ್ಯವಾಗಿವೆ. ವ್ಯವಸ್ಥಿತ ವೈಫಲ್ಯಗಳನ್ನು ಸರಿಪಡಿಸಲು ಮತ್ತು ಪ್ರಯಾಣಿಕರ ವಿಶ್ವಾಸವನ್ನು ಪುನಃಸ್ಥಾಪಿಸಲು ನಾನು ಒತ್ತಾಯಿಸುತ್ತೇನೆ ಎಂದು ಸೂರ್ಯ ತಿಳಿಸಿದ್ದಾರೆ.

ಇದನ್ನೂ ಓದಿ ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ!

ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯು ಬಿಎಂಆರ್‌ಸಿಎಲ್‌ನ ಅತ್ಯುನ್ನತ ಆದ್ಯತೆಯಾಗಿರಬೇಕು. ನಮ್ಮ ಮೆಟ್ರೋದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಜವಾಬ್ದಾರರಾಗಿರುವ ಪ್ರಾಧಿಕಾರವಾಗಿ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ತಡೆರಹಿತ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದೆ. ಹೀಗಾಗಿ ರಾಜ್ಯ ಸರ್ಕಾರವು ಇದನ್ನು ತಕ್ಷಣದ ತುರ್ತುಸ್ಥಿತಿಯೊಂದಿಗೆ ಪರಿಗಣಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *