ನಮ್ಮ ಮೆಟ್ರೋ ಹಳದಿ ಮಾರ್ಗ ರೈಲಿನ ಸಂಗ್ರಹ ಚಿತ್ರImage Credit source: tv9
ಬೆಂಗಳೂರು, ಜೂನ್ 16: ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಪರಿಹಾರ ಎಂದೇ ಬಿಂಬಿತವಾಗಿರುವ ನಮ್ಮ ಮೆಟ್ರೋದ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ (Yellow Line) ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೋಮವಾರ 13ನೇ ಹೊಸ ರೈಲನ್ನು ಬರಮಾಡಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಾಂಶಗಳು
- ಹೆಬ್ಬಗೋಡಿ ಡಿಪೋಗೆ ಆಗಮಿಸಿದ 13ನೇ ರೈಲು
- ರಾತ್ರಿ ವೇಳೆ 750 ಕಿಮೀ ಟ್ರಯಲ್ ರನ್
- ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿರುವ ರೈಲುಗಳ ಸೇರ್ಪಡೆ
ಆರು ಕೋಚ್ಗಳನ್ನು ಒಳಗೊಂಡಿರುವ ಈ ಹೊಸ ಮೆಟ್ರೋ ರೈಲು ಸೋಮವಾರ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದೆ. ಸದ್ಯ ಟ್ರೈಲರ್ಗಳಿಂದ ಕೋಚ್ಗಳನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಇವುಗಳನ್ನು ಒಟ್ಟುಗೂಡಿಸಿ (Assemble) ಸ್ಟ್ಯಾಟಿಕ್ ಟೆಸ್ಟಿಂಗ್ಗಾಗಿ ಇನ್ಸ್ಪೆಕ್ಷನ್ ಬೇ ಲೈನ್ಗೆ (IBL) ಕೊಂಡೊಯ್ಯಲಾಗುತ್ತದೆ. ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಮುನ್ನ ಈ ರೈಲು ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಲೋಮೀಟರ್ಗಳಷ್ಟು ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಬೇಕಿದೆ. ಮೆಟ್ರೋ ಸಂಚಾರಕ್ಕೆ ತೊಂದರೆಯಾಗದಂತೆ ಈ ಪ್ರಕ್ರಿಯೆಯನ್ನು ಕೇವಲ ರಾತ್ರಿ ವೇಳೆಯಲ್ಲಿ ಮಾತ್ರ ನಡೆಸಲಾಗುತ್ತದೆ.
ಪೀಕ್ ಅವರ್ನಲ್ಲಿ 5 ನಿಮಿಷಕ್ಕೊಂದು ರೈಲು
ಪ್ರಸ್ತುತ 19.75 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಪೀಕ್ ಅವರ್ನಲ್ಲಿ (ಹೆಚ್ಚಿನ ದಟ್ಟಣೆ ಇರುವ ಸಮಯ) ಪ್ರತಿ 7 ನಿಮಿಷಕ್ಕೊಮ್ಮೆ ಮೆಟ್ರೋ ಸೌಲಭ್ಯ ಸಿಗುತ್ತಿದೆ. ಇನ್ನುಳಿದ ಎರಡು ರೈಲುಗಳು ಈಗಾಗಲೇ ಪರೀಕ್ಷಾ ಹಂತದಲ್ಲಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿವೆ. ಕೋಲ್ಕತ್ತಾ ಸಮೀಪದ ತಿತಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು 14 ಮತ್ತು 15ನೇ ರೈಲುಗಳನ್ನು ಸಿದ್ಧಪಡಿಸುತ್ತಿದ್ದು, ಜುಲೈ ಆರಂಭದ ವೇಳೆಗೆ ಅವು ಬೆಂಗಳೂರಿಗೆ ರವಾನೆಯಾಗಲಿವೆ.
ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿಯ ಮೊದಲ ಫಲ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಮತ್ತೊಂದು ಗುಡ್ ನ್ಯೂಸ್
ಬರುವ ಆಗಸ್ಟ್ 11ಕ್ಕೆ ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವದ ವೇಳೆಗೆ ಎಲ್ಲಾ 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಲಿವೆ. ಇದರಿಂದಾಗಿ ಪೀಕ್ ಅವರ್ನ ಕಾಯುವಿಕೆ ಅವಧಿ 5 ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆಯಾಗಲಿದೆ. ಇದರಲ್ಲಿ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿ ಎದುರಿಸಲು ರಿಸರ್ವ್ ಸ್ಟಾಕ್ ಆಗಿ ಇರಿಸಲಾಗುತ್ತದೆ. ಇದರ ನಂತರ ಟಿಆರ್ಎಸ್ಎಲ್ ಸಂಸ್ಥೆಯು ಪರ್ಪಲ್ ಮತ್ತು ಗ್ರೀನ್ ಲೈನ್ಗಳಿಗಾಗಿ 18 ರೈಲುಗಳನ್ನು ಪೂರೈಸುವತ್ತ ಗಮನ ಹರಿಸಲಿದೆ. ಅಲ್ಲದೆ, 2027ರ ವೇಳೆಗೆ ಬೆಮೆಲ್ (BEML) ಸಂಸ್ಥೆಯಿಂದ ಹಳದಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಮತ್ತೂ 6 ರೈಲುಗಳು ಪೂರೈಕೆಯಾಗಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ