
ಬೆಂಗಳೂರು, ಮಾರ್ಚ್ 24: ನಮ್ಮ ಮೆಟ್ರೋ (namma-metro) 3ನೇ ಹಂತ ಆರೆಂಜ್ ಲೈನ್ ಯೋಜನೆಗಾಗಿ ಜಪಾನ್ನಿಂದ ಸಾಲ ಪಡೆದಿದೆ. ಎರಡು ಹಂತದಲ್ಲಿ 6,775 ಕೋಟಿ ರೂ ಸಾಲ ಒಪ್ಪಂದಕ್ಕೆ ಜಪಾನ್ ಸಂಸ್ಥೆ ಜತೆ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಿದೆ. ಜಪಾನ್ ಇಂಟರ್ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿಯಿಂದ 30 ವರ್ಷ ಅವಧಿಗೆ ಸಾಲ ಪಡೆಯಲಾಗಿದೆ. 2032ಕ್ಕೆ ಆರೆಂಜ್ ಮಾರ್ಗ ಸಂಚಾರಕ್ಕೆ ಮುಕ್ತ ಸಾಧ್ಯತೆ ಇದೆ.
ನಮ್ಮ ಮೆಟ್ರೋ 3ನೇ ಹಂತಕ್ಕಾಗಿ ಜಪಾನ್ನಿಂದ ಸಾಲ
ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಗೆ ಸಾಲದ ಒಪ್ಪಂದಕ್ಕೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಪರವಾಗಿ, ಭಾರತದ JICA ಕಚೇರಿಯ ಮುಖ್ಯ ಪ್ರತಿನಿಧಿ ಟಕೆಉಚಿ ತಕುರು ಮತ್ತು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಅಲೋಕ್ ತಿವಾರಿ 24ನೇ ಮಾರ್ಚ್ 2026ರಂದು ನವದೆಹಲಿಯಲ್ಲಿ ಸಹಿ ಹಾಕಿದ್ದಾರೆ. ಈ ವೇಳೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ. ರವಿಶಂಕರ್ ಹಾಗೂ ಹಣಕಾಸು ನಿರ್ದೇಶಕರು ಎಸ್. ಶಿವಮಾಥನ್ ಉಪಸ್ಥಿತರಿದ್ದರು.
ಬಿಎಂಆರ್ಸಿಎಲ್ ಟ್ವೀಟ್
ಬೆಂಗಳೂರು ಮೆಟ್ರೋ ರೈಲು ಹಂತ-3ರ ಯೋಜನೆ ಸಾಲದ ಒಪಂದಕ್ಕೆ ಸಹಿ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ.
Signing of Loan agreement for Bangalore Metro Rail Project Phase-3. For further details please check the media release. pic.twitter.com/LBEwxm1mxl
— ನಮ್ಮ ಮೆಟ್ರೋ (@OfficialBMRCL) March 24, 2026
ಭಾರತ ಸರ್ಕಾರ ಅನುಮೋದಿಸಿರುವ ಒಟ್ಟು ರೂ. 6,775 ಕೋಟಿ ಸಾಲದಲ್ಲಿ, JICA ಎರಡು ಹಂತಗಳಲ್ಲಿ ಸಾಲವನ್ನು ನೀಡಲು ಒಪ್ಪಿಕೊಂಡಿದೆ. ಮೊದಲ ಹಂತವಾಗಿ 6,100 ಕೋಟಿ ರೂ ಮತ್ತು ಉಳಿದ ಮೊತ್ತವನ್ನು ದ್ವಿತೀಯ ಹಂತದಲ್ಲಿ ನೀಡಲಾಗುತ್ತದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3 ಒಟ್ಟು 44.65 ಕಿಮೀ ಉದ್ದವನ್ನು ಹೊಂದಿದ್ದು, ಇದರಲ್ಲಿ ಎರಡು ಕಾರಿಡಾರುಗಳು ಒಳಗೊಂಡಿವೆ. ಮೊದಲನೇ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ (ಹೊರ ವರ್ತುಲ ರಸ್ತೆ ಪಶ್ಚಿಮ ಭಾಗದ ಮೂಲಕ) 32.15 ಕಿಮೀ. ಎರಡನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆವರೆಗೆ (ಮಗಡಿ ರಸ್ತೆಯ ಮೂಲಕ) 12.5 ಕಿಮೀ ಇದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು
ಭಾರತ ಸರ್ಕಾರವು ಈ ಯೋಜನೆಗೆ 13ನೇ ಸೆಪ್ಟೆಂಬರ್ 2024 ರಂದು ಅನುಮೋದನೆ ನೀಡಿದ್ದು, ಒಟ್ಟು 15,611 ಕೋಟಿ ರೂ ವೆಚ್ಚ ತಗುಲುವುದಾಗಿ ನಿಗದಿಪಡಿಸಲಾಗಿದೆ. JICA ಸಂಸ್ಥೆಯು, 5 ಸಿವಿಲ್ ಪ್ಯಾಕೇಜುಗಳು, ಪರ್ಮನೆಂಟ್ ವೇ, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ (S&T), ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ (AFC), ಟ್ರ್ಯಾಕ್ಷನ್ ಹಾಗೂ ಸಲಹಾ ಸೇವೆಗಳಿಗೆ ಹಣಕಾಸು ನೆರವು ನೀಡುತ್ತಿದ್ದು, 30 ವರ್ಷ ಅವಧಿಯ ಸಾಲ ಇದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.