ಕಲಬುರಗಿ, ಜು.31: ಕತ್ತೆತ್ತಿ ಸಾಧನೆ ಮಾಡಬೇಕಾದ ವಯಸ್ಸಿನಲ್ಲಿ, ಕಾಲಿಡಲು ಸೂಕ್ತ ರಸ್ತೆಯಿಲ್ಲದೆ ಶಾಲಾ ಮಕ್ಕಳು ಕೆಸರಿನ ಹಾದಿಯಲ್ಲೇ ಸರ್ಕಸ್ ಮಾಡುತ್ತಾ ಶಾಲೆಗೆ ತೆರಳುತ್ತಿರುವ ಆಕ್ರೋಶಜನಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ವಸ್ತಾರಿ ಗ್ರಾಮದಲ್ಲಿ ಸೂಕ್ತ ರಸ್ತೆ ಸೌಕರ್ಯವಿಲ್ಲದೆ, ವಿದ್ಯಾರ್ಥಿಗಳು ಪ್ರತಿದಿನ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಮುಖದಲ್ಲಿ ಬೇಸರ ಹೊತ್ತು ಕೆಸರಿನಲ್ಲೇ ನಡೆದುಕೊಂಡು ಶಾಲೆಗೆ ತೆರಳುವ ದುಸ್ಥಿತಿ ನಿರ್ಮಾಣವಾಗಿದೆ. ವಸ್ತಾರಿ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗಷ್ಟೇ ನೂತನವಾಗಿ ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಶಾಲೆಯನ್ನು ಆರಂಭಿಸಿದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆ ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಲು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಮಳೆಗಾಲದ ಹಿನ್ನೆಲೆಯಲ್ಲಿ ಇಡೀ ಹಾದಿ ಕೆಸರು ಗದ್ದೆಯಂತಾಗಿದ್ದು, ಶಾಲಾ ಸಮವಸ್ತ್ರ (Uniform) ಹಾಗೂ ಪುಸ್ತಕದ ಚೀಲಗಳನ್ನು ಹೊತ್ತುಕೊಂಡು ಬರುವ ವಿದ್ಯಾರ್ಥಿಗಳು ಕಾಲಿಗೆ ಹಾಕಿದ ಚಪ್ಪಲಿ ಕೆಸರಿನಲ್ಲಿ ಹೂತುಹೋಗುತ್ತದೆ ಎಂದು ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಕೆಸರಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. “ನಮ್ಮ ಶಾಲೆಗೆ ಸೂಕ್ತ ರಸ್ತೆ ನಿರ್ಮಿಸಿಕೊಡಿ, ನಾವು ನೆಮ್ಮದಿಯಿಂದ ಪಾಠ ಕೇಳುವಂತೆ ಮಾಡಿ” ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಾ ಆಗ್ರಹಿಸಿದ್ದಾರೆ. ಗ್ರಾಮೀಣ ಭಾಗದ ಶಿಕ್ಷಣ ಹಾಗೂ ಮೂಲಸೌಕರ್ಯದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಜನಪ್ರತಿನಿಧಿಗಳು ಈ ಕಡೆ ತಕ್ಷಣ ಗಮನಹರಿಸಿ, ವಿದ್ಯಾರ್ಥಿಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ