ನಟಿ ನಭಾ ನಟೇಶ್ ಅವರು ಕನ್ನಡದವರು. ಸದ್ಯ ಪರಭಾಷೆಯಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಒಳ್ಳೊಳ್ಳೆಯ ಆಫರ್ಗಳು ಹುಡುಕಿ ಬರುತ್ತಿವೆ. ಈಗ ವಿರಾಟ್ ಕರ್ಣ ಹಾಗೂ ಅಭಿಷೇಕ್ ನಾಮಾ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ನಾಗಬಂಧಂ’ ಸಿನಿಮಾದಲ್ಲಿ ನಭಾ (Nabha Natesh) ನಟಿಸಿದ್ದಾರೆ. ಇಡೀ ಕಥೆಗೆ ಟ್ವಿಸ್ಟ್ ಕೊಡುವ ಪಾತ್ರ ಅವರದ್ದಂತೆ. ಸಿನಿಮಾ ಜುಲೈ 3ರಂದು ತೆರೆಗೆ ಬರಲು ಸಜ್ಜಾಗಿದೆ. ನಭಾ ನಟೇಶ್, ತಮ್ಮ ಪಾತ್ರ ಹಾಗೂ ಶೂಟಿಂಗ್ ಸೆಟ್ನ ರೋಚಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಇದುವರೆಗೆ ಮಾಡದ ವಿಭಿನ್ನ ಪಾತ್ರ
ಚಿತ್ರದಲ್ಲಿ ತಮ್ಮ ‘ಪಾರ್ವತಿ’ ಪಾತ್ರದ ಬಗ್ಗೆ ಮಾತನಾಡಿರುವ ನಭಾ, ‘ನಾನು ಈ ಹಿಂದೆ ಎಂದೂ ಇಂತಹ ಪಾತ್ರ ಮಾಡಿಲ್ಲ. ಪಾರ್ವತಿ ಸಾಂಪ್ರದಾಯಿಕ ಹುಡುಗಿಯಾಗಿದ್ದರೂ ಅಷ್ಟೇ ಧೈರ್ಯಶಾಲಿ. ಕಥೆಯ ಪ್ರತಿಯೊಂದು ಪ್ರಮುಖ ತಿರುವುಗಳು ಆಕೆಯ ನಿರ್ಧಾರಗಳ ಮೇಲೆಯೇ ಆಧಾರಿತವಾಗಿವೆ. ನನ್ನ ಕರಿಯರ್ನಲ್ಲೇ ಇದು ಅತ್ಯಂತ ಪ್ರಭಾವಶಾಲಿ ಪಾತ್ರ’ ಎಂದಿದ್ದಾರೆ.
ದೇವಸ್ಥಾನದ ಸೆಟ್, ಸಸ್ಯಹಾರಿ ಊಟ
ಈ ಚಿತ್ರಕ್ಕಾಗಿ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಬೃಹತ್ ಸೆಟ್ ಒಂದನ್ನು ಮರುಸೃಷ್ಟಿ ಮಾಡಲಾಗಿತ್ತು. ಆ ಸೆಟ್ನ ಒಳಗಿದ್ದ ಅನುಭವವನ್ನು ಹಂಚಿಕೊಂಡ ನಭಾ ನಟೇಶ್, ‘ದೇವಸ್ಥಾನದ ಸೆಟ್ ಒಳಗೆ ಕಾಲಿಡುತ್ತಿದ್ದಂತೆ ನಮಗೆ ನಿಜವಾದ ಭಕ್ತಿ ಮತ್ತು ಆಧ್ಯಾತ್ಮಿಕ ಭಾವನೆ ಮೂಡುತ್ತಿತ್ತು. ಚಿತ್ರತಂಡದ ಪ್ರತಿಯೊಬ್ಬರೂ ಆ ಪವಿತ್ರ ವಾತಾವರಣಕ್ಕೆ ಗೌರವ ನೀಡಿದ್ದರು. ಪ್ರತಿದಿನ ಶೂಟಿಂಗ್ ಆರಂಭಕ್ಕೂ ಮುನ್ನ ವಿಶೇಷ ಪೂಜೆ-ವಿಧಿವಿಧಾನಗಳು ನಡೆಯುತ್ತಿದ್ದವು. ಅಷ್ಟೇ ಅಲ್ಲದೆ, ಆ ಶೆಡ್ಯೂಲ್ ಮುಗಿಯುವವರೆಗೂ ಚಿತ್ರತಂಡದವರೆಲ್ಲರೂ ಕಡ್ಡಾಯವಾಗಿ ಸಸ್ಯಹಾರಿ ಆಹಾರವನ್ನೇ ಸೇವಿಸುತ್ತಿದ್ದೆವು’ ಎಂದು ಶೂಟಿಂಗ್ ದಿನಗಳನ್ನು ನೆನೆದಿದ್ದಾರೆ.
ಇದನ್ನೂ ಓದಿ: ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಹೀರೋಯಿನ್ ರೀತಿ ಕಾಣ್ತಿದ್ದಾರೆ ಕನ್ನಡದ ನಭಾ ನಟೇಶ್
5000 ನೃತ್ಯಗಾರರೊಂದಿಗೆ ಭರ್ಜರಿ ಸಾಂಗ್
ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಗಣೇಶ್ ಆಚಾರ್ಯ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಭಕ್ತಿ ಪ್ರಧಾನ ಸಾಂಗ್. ಇದರಲ್ಲಿ ಸುಮಾರು 5,000 ಜನ ನೃತ್ಯಗಾರರು ಭಾಗವಹಿಸಿದ್ದು, ವಿಶುವಲ್ ಆಗಿ ಈ ಹಾಡು ಪ್ರೇಕ್ಷಕರಿಗೆ ಕಣ್ಣಿನ ಹಬ್ಬವಾಗಲಿದೆಯಂತೆ. ‘ನಾಗಬಂಧಂ’ ಚಿತ್ರಮಂದಿರದಲ್ಲೇ ನೋಡಬೇಕಾದ ದೃಶ್ಯ ವೈಭವ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.