Headlines

‘ನಾಗೇಂದ್ರರನ್ನು ಪುನಃ ಮಂತ್ರಿ ಮಾಡಿದ್ದು ಇದೇ ಕಾರಣಕ್ಕೆ’: ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ – Kannada News | ‘Inducted Out of Fear He Would Turn Approver’: Janardhana Reddy’s Explosive Charge Over B Nagendra’s Cabinet Return

ಸ್ಫೋಟಕ ಆರೋಪ ಮಾಡಿದ ಜನಾರ್ದನ ರೆಡ್ಡಿ
Image Credit source: PTI

ಬಳ್ಳಾರಿ, ಆಗಸ್ಟ್​​ 04: ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ನಿನ್ನೆಯಷ್ಟೇ (ಆ.03) ನಡೆದಿದ್ದು, 19 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಪೈಕಿ ಈ ಹಿಂದೆ ವಾಲ್ಮೀಕಿ ನಿಗಮದ ಹಗರಣ ಸಂಬಂಧ ತಲೆದಂಡವಾಗಿದ್ದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಕೂಡ ಮಂತ್ರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರ ಮಾತ್ರವಲ್ಲದೇ ಬಹುತೇಕ ಪಾಲುದಾರ ಇದ್ದಾರೆ ಎಂದು ತಾನು ಹೇಳಿದ್ದು ಈಗ ನಿಜವಾಗಿದೆ. ನಾಗೇಂದ್ರ ಮುಖಕ್ಕೆ ಬೆಣ್ಣೆ ಹಚ್ಚಿರೋದು ತೋರಿಸಿ, ಉಳಿದವರು ಹಿಂದೆ ಲೂಟಿ ಹೊಡೆದಿದ್ದಾರೆ. ನಾಗೇಂದ್ರರಿಗೆ 10-20 ಪರ್ಸೆಂಟ್ ಕೊಟ್ಟು, ಉಳಿದ ಹಣವನ್ನು ಬಳ್ಳಾರಿ, ತೆಲಂಗಾಣ ಮತ್ತು ಗೋವಾ ಚುನಾವಣೆಗಳಿಗೆ ಬಳಸಿದ್ದಾರೆ. ಒಂದೊಮ್ಮೆ ನಾಗೇಂದ್ರರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಅವರು ಅಪ್ರೂವಲ್ ಆಗಿ ಬಿಡುತ್ತಿದ್ದರು ಎಂಬ ಕಾರಣಕ್ಕೆ ಹುದ್ದೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಸತ್ಯ ಹೇಳಬಹುದೆಂಬ ಭಯಕ್ಕೆ ಮಂತ್ರಿಗಿರಿ ನೀಡಿದ್ದಾರೆ’

ಹಗರಣದ ದುಡ್ಡು ಕಾಂಗ್ರೆಸ್ ಪಕ್ಷದವರು ತಿಂದು ತನ್ನ ಜೈಲಿಗೆ ಹಾಕಿಸಿದ್ರು ಎಂದು ಕೋರ್ಟ್ ಮುಂದೆ ನಾಗೇಂದ್ರ ಹೇಳುತ್ತಿದ್ದರು. ಇದೇ ಭಯಕ್ಕೆ ಅವರನ್ನು ಮಂತ್ರಿ ಮಾಡಿದ್ದಾರೆ. ನಾಗೇಂದ್ರ ಬಗ್ಗೆ ತನಗೂ ಅನುಕಂಪ ಇದೆ. ಪಾಪ 10-20 ಪರ್ಸೆಂಟ್ ದುಡ್ಡು ತಿಂದು ಜೈಲಿಗೆ ಹೋದರು. ಆದರೆ ಅವರು ಬುದ್ಧಿವಂತರಾಗಿದ್ದು, ಯಾರ್ಯಾರು ಹಣ ತಿಂದಿದ್ದಾರೆ ಎಂಬ ಬಗ್ಗೆ ಪಟ್ಟಿ ಮಾಡಿ ಕೋರ್ಟ್​​ಗೆ ಕೊಡುತ್ತೇನೆ ಎಂದಿದ್ದಾರೆ. ಹೀಗಾಗಿಯೇ ಕಾಂಗ್ರೆಸ್​​ ಅವರಿಗೆ ಮತ್ತೆ ಮಣೆ ಹಾಕಿದೆ ಎಂದು ಜನಾರ್ದನ ರೆಡ್ಡಿ ಸ್ಫೋಟಕ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಿಲ್ಲ ಎಂದ ಬಿ‌ಕೆ ಹರಿಪ್ರಸಾದ್

ಬಿಜೆಪಿಯಿಂದ ಪ್ರತಿಭಟನೆ

ಮತ್ತೊಂದೆಡೆ ಇದೇ ವಿಚಾರವಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್​​. ಅಶೋಕ್​​ ಕೂಡ ಕಿಡಿ ಕಾರಿದ್ದಾರೆ. ವಾಲ್ಮೀಕಿ ನಿಗಮದಲ್ಲಿನ ಹಗರಣ ಸಂಬಂಧ ಹೋರಾಟ ಮಾಡಿ ನಾವು ನಾಗೇಂದ್ರ ಅವರ ರಾಜೀನಾಮೆ ಕೊಡಿಸಿದ್ದೆವು. ಆದರೆ ಈಗ ಅವರನ್ನು ವಾಷಿಂಗ್​​ ಮಷಿನ್​​ಗೆ ಹಾಕಿ ಕ್ಲೀನ್​​ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರೆ. ಇನ್ನು ನೂತನ ಸಚಿವ ನಾಗೇಂದ್ರರನ್ನು ವಜಾ ಮಾಡುವಂತೆ ಆಗ್ರಹಿಸಿ ಪರಿಷತ್ ಸದಸ್ಯ ಲಿಂಗರಾಜ್ ಪಾಟೀಲ್ ನೇತೃತ್ವದಲ್ಲಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿಗರು ಪ್ರತಿಭಟನೆ ಕೂಡ ನಡೆಸಿದ್ದಾರೆ. ವಾಲ್ಮೀಕಿ ನಿಗಮದ 187ಕೋಟಿ ನುಂಗಿದವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​​ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:38 pm, Tue, 4 August 26

Source link

Leave a Reply

Your email address will not be published. Required fields are marked *