‘ನಾಚಿಕೆಗೇಡಿನ ಕುಟುಂಬ’: ಕೊಲೆ ಆರೋಪಿಯ ಸಂಭ್ರಮ ನೋಡಿ ಗರಂ ಆದ ನಟ ವಿಶಾಲ್

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ 2024ರ ಪುಣೆ ಪೋರ್ಷೆ ಕಾರ್ ಅಪಘಾತದ (Pune Porsche Case) ಪ್ರಮುಖ ಆರೋಪಿ ವೇದಾಂತ್ ಅಗರ್ವಾಲ್ ಕುಟುಂಬವು ಜೈಲಿನಿಂದ ಬೇಲ್ ಸಿಕ್ಕಿದ್ದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸುಪ್ರೀಂ ಕೋರ್ಟ್‌ನಿಂದ ಕಠಿಣ ಷರತ್ತುಗಳೊಂದಿಗೆ ಇತ್ತೀಚೆಗೆ ಜಾಮೀನು ಪಡೆದ ಬಳಿಕ, ಇಡೀ ಕುಟುಂಬ ಹೋಟೆಲ್ ಒಂದರಲ್ಲಿ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವ ಈ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಾಲಿವುಡ್ ನಟ ವಿಶಾಲ್ (Actor Vishal) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿ ಕುಟುಂಬದ ವಿರುದ್ಧ ಹರಿಹಾಯ್ದಿರುವ ವಿಶಾಲ್, ‘ನೀವೇನು ಒಲಿಂಪಿಕ್ಸ್‌ನಲ್ಲಿ ಮೆಡಲ್ ಗೆದ್ದಿಲ್ಲ ಅಥವಾ ಕಾಲೇಜು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿಲ್ಲ. ನಿಮ್ಮ ನಾಚಿಕೆಗೇಡಿನ ಅಗರ್ವಾಲ್ ಕುಟುಂಬ ಹೆಮ್ಮೆ ಪಡುವಂತಹ ಯಾವುದೇ ಕೆಲಸವನ್ನೂ ನೀವು ಮಾಡಿಲ್ಲ. ಮೂರ್ಖ ವೇದಾಂತ್ ಅಗರ್ವಾಲ್, ನಿನ್ನ ಮದ್ಯದ ಅಮಲಿನ ಡ್ರೈವಿಂಗ್‌ನಿಂದಾಗಿ ಇಬ್ಬರು ಉದಯೋನ್ಮುಖ ಐಟಿ ಇಂಜಿನಿಯರ್‌ಗಳನ್ನು ಕೊಂದಿದ್ದೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಲ್ಲಿನ ಸಿಸ್ಟಮ್ ಭ್ರಷ್ಟವಾಗಿರಬಹುದು. ನೀನು ಮಾಡಿದ ತಪ್ಪಿಗೆ ನಿನ್ನ ಹಣದ ಬಲ ಹಾಗೂ ಪ್ರಭಾವ ಬಳಸಿ ಬೇಲ್ ಪಡೆದಿರಬಹುದು. ನಿನ್ನ ನಾಚಿಕೆಯಿಲ್ಲದ ಕುಟುಂಬದ ಜೊತೆ ಸಮಾಜದಲ್ಲಿ ಬಹಿರಂಗವಾಗಿ ಸಂಭ್ರಮಿಸುತ್ತಿರಬಹುದು. ಆದರೆ ನೆನಪಿರಲಿ, ಕರ್ಮ ಅನ್ನೋದು ತುಂಬಾ ಡೇಂಜರ್. ನಾವು ಏನು ಬಿತ್ತುತ್ತೇವೋ ಅದನ್ನೇ ಉಣ್ಣಬೇಕಾಗುತ್ತದೆ. ನಾನು ನಿನಗೆ ಶಾಪ ಹಾಕುತ್ತಿಲ್ಲ. ಆದರೆ ನಿನ್ನ ತಂದೆ ಕಾನೂನಿನ ಎಲ್ಲಾ ಲೋಪದೋಷಗಳನ್ನು ಮುಚ್ಚಿ ನಿನ್ನನ್ನು ಹೊರಗೆ ತಂದಿದ್ದರೂ, ನೀನು ಈ ರೀತಿ ಸಂಭ್ರಮಿಸಲು ಖಂಡಿತ ಅರ್ಹನಲ್ಲ’ ಎಂದು ವಿಶಾಲ್ ಖಾರವಾಗಿ ಬರೆದಿದ್ದಾರೆ.

ಈ ವಿಡಿಯೋ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಆರೋಪಿ ವೇದಾಂತ್ ಅಗರ್ವಾಲ್ ತಂದೆ ವಿಶಾಲ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ. ‘ಈ ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದು ನಮ್ಮ 25ನೇ ಮದುವೆಯ ವಾರ್ಷಿಕೋತ್ಸವದ ಅಂಗವಾಗಿ 2023ರ ಸೆಪ್ಟೆಂಬರ್ 2ರಂದು ಗೋವಾದಲ್ಲಿ ಶೂಟ್ ಮಾಡಲಾದ ವಿಡಿಯೋ ಆಗಿದೆ. ಅಪಘಾತಕ್ಕೂ ಇದಕ್ಕೂ ಸಂಬಂಧವಿಲ್ಲ. ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಸಂಭ್ರಮಿಸುತ್ತಿದ್ದೇವೆ ಎಂಬ ವರದಿಗಳು ಸುಳ್ಳು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ಸಾಯಿ ಧನ್ಷಿಕಾ ಜೊತೆಗೆ ತಮಿಳು ನಟ ವಿಶಾಲ್ ನಿಶ್ಚಿತಾರ್ಥ: ಚಿತ್ರಗಳು ಇಲ್ಲಿವೆ

ಏನಿದು ಪುಣೆ ಪೋರ್ಷೆ ಕಾರ್ ಘಟನೆ?

ಮೇ 2024ರಲ್ಲಿ ಪುಣೆಯಲ್ಲಿ ಅಪ್ರಾಪ್ತ ಬಾಲಕ ವೇದಾಂತ್ ಅಗರ್ವಾಲ್ ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಪೋರ್ಷೆ ಕಾರನ್ನು ಚಲಾಯಿಸಿ ಇಬ್ಬರು ಐಟಿ ಇಂಜಿನಿಯರ್‌ಗಳ ಸಾವಿಗೆ ಕಾರಣವಾಗಿದ್ದನು. ಈ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಪೋಷಕರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *