ಶಿವಾನಂದ ನೀಲಣ್ಣವರ್Image Credit source: tv9 kannada
ಬೆಳಗಾವಿ, ಮೇ 15: ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಕೋಟ್ಯಂತರ ರೂ ಹಣ ದುರಪಯೋಗವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಶಿವಂ ಅಸೋಸಿಯೇಟ್ಸ್ (Shivam Associates) ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್ ಎಂಬಾತ ಯಾವುದೇ ನಿಯಮಗಳನ್ನು ಪಾಲಿಸದೆ, ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಬರೋಬ್ಬರಿ 40 ರಿಂದ 45 ಸಾವಿರ ಜನರಿಂದ ಅಂದಾಜು 4,500 ಕೋಟಿ ರೂ ಹೂಡಿಕೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದ್ದು, ಸದ್ಯ ಶಿವಾನಂದ ನೀಲಣ್ಣವರ್ ಮನೆ ಸೇರಿದಂತೆ ಕಚೇರಿ ಕೂಡ ಸೀಜ್ ಮಾಡಲಾಗಿದ್ದು, ಡಿಸಿಗೆ ವರದಿ ಸಲ್ಲಿಕೆ ಮಾಡಲಾಗಿದೆ.
ಮುಖ್ಯಾಂಶಗಳು
- ಬೆಳಗಾವಿಯಲ್ಲಿ ₹4,500 ಕೋಟಿ ವಂಚನೆ ಆರೋಪ ಕೇಸ್
- ಶಿವಾನಂದ ನೀಲಣ್ಣವರ್ ಮನೆ, ಕಚೇರಿ ಸೀಜ್
- ಸಿಐಡಿ ತನಿಖೆಗೆ ಒತ್ತಾಯ
ಪ್ರಕರಣದ ಗಾಂಭೀರ್ಯವನ್ನು ಅರಿತು ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ ತನಿಖೆಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಬೆಳಗಾವಿಯ ಶಿವಬಸವನಗರದಲ್ಲಿರುವ ಕಚೇರಿ, ಮನೆ ಹಾಗೂ ಅಪಾರ್ಟ್ಮೆಂಟ್ ಸೇರಿದಂತೆ ಹಲವು ಕಡೆಗಳಲ್ಲಿ ಎಸಿ ಶ್ರವಣ್ ಕುಮಾರ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಪೊಲೀಸರ ಬಿಗಿ ಬಂದೋಬಸ್ತ್ನೊಂದಿಗೆ 24 ಗಂಟೆಗಳ ಕಾಲ ಸುದೀರ್ಘ ಜಾಲಾಡಿದ್ದು, ಸದ್ಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.
ದಾಖಲೆಗಳಿಲ್ಲದ ಸಾವಿರಾರು ಕೋಟಿ ವ್ಯವಹಾರ: ಆರ್ಬಿಐ ನಿಯಮಗಳ ಉಲ್ಲಂಘನೆ
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅತಿರೇಕದ ಭಾಷಣಗಳ ಮೂಲಕ ವೈರಲ್ ಆಗಿದ್ದ ಶಿವಾನಂದ ನೀಲಣ್ಣವರ್ ಹಿನ್ನೆಲೆಯನ್ನು ಕೆದಕಿದಾಗ ಈ ಬೃಹತ್ ಜಾಲ ಪತ್ತೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಯಾವುದೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಹಾಗೂ ಹೂಡಿಕೆ ಮಾಡಿದ ಸಾರ್ವಜನಿಕರ ಹಣಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ನಿರ್ವಹಿಸಿಲ್ಲ ಎನ್ನಲಾಗಿದೆ. ಆನ್ಲೈನ್ ಮೂಲಕವೇ ಇಷ್ಟೊಂದು ಕೋಟ್ಯಂತರ ರೂ ವ್ಯವಹಾರ ನಡೆದಿದ್ದರೂ ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯದ ಗಮನಕ್ಕೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯ ವೇಳೆ ವ್ಯಕ್ತಿಯೊಬ್ಬರು ಯಾವುದೇ ದಾಖಲೆಯಿಲ್ಲದೆ 5 ಲಕ್ಷ ರೂ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.
ಧೈರ್ಯವಾಗಿರಿ: ಆಡಿಯೋ ಬಿಡುಗಡೆ ಮಾಡಿದ ಶಿವಾನಂದ ನೀಲಣ್ಣವರ್
ದಾಳಿಯ ಬೆನ್ನಲ್ಲೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಆಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. ‘ನನ್ನ ಮೊಬೈಲ್ ಬಂದ್ ಇದೆ, ಆದರೆ ನಾನು ಮನೆಯಲ್ಲೇ ಇದ್ದೇನೆ ಮತ್ತು ಸೆಕ್ಯೂರಿಟಿಯಲ್ಲಿದ್ದೇನೆ. ಇನ್ನು ಎರಡು ಮೂರು ದಿನಗಳಲ್ಲಿ ಎಂದಿನಂತೆ ಎಲ್ಲವೂ ಸರಿಯಾಗಲಿದೆ. ಹೂಡಿಕೆದಾರರು ಯಾರೂ ಹೆದರಬೇಡಿ, ವಿಶೇಷವಾಗಿ ಮಹಿಳೆಯರು ಧೈರ್ಯವಾಗಿರಿ’ ಎಂಬ ಸಂದೇಶ ನೀಡಿದ್ದಾರೆ.
ಬಂಧನದ ಭೀತಿ: ಸಿಐಡಿ ತನಿಖೆಗೆ ಒತ್ತಾಯ
ಮೂಲತಃ ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದವರಾದ ಶಿವಾನಂದ, ಬೆಳಗಾವಿಯ ಮಹಿಳೆಯನ್ನು ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ನಾನು ಸಿಎಂ ಆಗ್ಲಾ?, ನಾನು ಪಕ್ಕಾ ಗಂಡ್ಸು’ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಹವಾ ಸೃಷ್ಟಿಸಲು ಯತ್ನಿಸುತ್ತಿದ್ದರು. ಸದ್ಯ ಇವರ ವಿರುದ್ಧ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಮುಂದಿನ ಕ್ರಮವೇನು?
ದಾಳಿ ವೇಳೆಯಲ್ಲಿ ಸಿಕ್ಕ ದಾಖಲೆಗಳು, ಪರಿಶೀಲನೆ ವೇಳೆಯಲ್ಲಿ ಕಂಡು ಬಂದ ವಿಷಯಗಳ ಬಗ್ಗೆ ಸದ್ಯ ಎಸಿ ಶ್ರವಣಕುಮಾರ್ ಅವರು ದಾಳಿಯ ಸಂಪೂರ್ಣ ವರದಿಯನ್ನು ಡಿಸಿ ಮೊಹಮ್ಮದ್ ರೋಷನ್ಗೆ ಸಲ್ಲಿಸಲಿದ್ದು, ಜಿಲ್ಲಾಡಳಿತ ಶಿವಾನಂದನ ಬಂಧನಕ್ಕೆ ಆದೇಶಿಸುತ್ತದೆಯೇ ಅಥವಾ ತನಿಖೆಯನ್ನು ಮುಂದುವರಿಸುತ್ತದೆಯೇ ಎಂದು ಕಾದು ನೋಡಬೇಕಿದೆ. ಈ ಹಗರಣದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾವಿರಾರು ಗ್ರಾಹಕರು ಹಣ ಹೂಡಿರುವುದರಿಂದ, ಪ್ರಕರಣವನ್ನು ಉನ್ನತ ಮಟ್ಟದ ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಸಾಮಾಜಿಕ ಹೋರಾಟಗಾರ ರಾಜು ಟೋಪಣ್ಣವರ್ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.