ವಾಷಿಂಗ್ಟನ್, ಫೆಬ್ರವರಿ 20: ಕಳೆದ ವರ್ಷ ಭಾರತ-ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನತೆಯ ಸಮಯದಲ್ಲಿ 11 ದುಬಾರಿ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು. ಆಗ ನಾನು ಎರಡೂ ದೇಶಗಳು ಯುದ್ಧ ನಿಲ್ಲಿಸದಿದ್ದರೆ ಶೇ. 200ರಷ್ಟು ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿದ್ದೆ. ಎರಡೂ ದೇಶಗಳ ನಡುವಿನ ಸಂಘರ್ಷ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಒಬ್ಬ ಮಹಾನ್ ವ್ಯಕ್ತಿ” ಎಂದು ಹೊಗಳಿದ್ದಾರೆ.
ಟ್ರಂಪ್ ಈ ಹೇಳಿಕೆ ನೀಡುವ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಲ್ಲೇ ಇದ್ದರು. ಆದರೂ ಅವರು ಈ ಹೇಳಿಕೆಯನ್ನು ಅಲ್ಲಗಳೆಯಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿದ್ದ ಯುದ್ಧವನ್ನು ನಿಲ್ಲಿಸಲು ನಾನು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದ್ದೆ. ಯುದ್ಧಗಳು ಉಲ್ಬಣಗೊಳ್ಳುತ್ತಿದ್ದ ಸಮಯದಲ್ಲಿ ಎರಡೂ ದೇಶಗಳ ನಾಯಕರೊಂದಿಗೆ ನೇರವಾಗಿ ಮಾತನಾಡಿದ್ದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಈ ಹೇಳಿಕೆಯನ್ನು ಭಾರತ ಈ ಹಿಂದೆ ಸಾಕಷ್ಟು ಬಾರಿ ನಿರಾಕರಿಸಿದೆ.
ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್ಗೆ ಗಡುವು ಕೊಟ್ಟ ಟ್ರಂಪ್
ಮೇ 2025ರಲ್ಲಿ ಭಾರತ-ಪಾಕ್ ಸಂಘರ್ಷದ ಸಮಯದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಲಿಲ್ಲ ಎಂದು ಭಾರತ ನಿರಂತರವಾಗಿ ಹೇಳುತ್ತಲೇ ಇದೆ. ಹಾಗೇ, ಭಾರತ ಎಷ್ಟು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂಬ ಬಗ್ಗೆ ಭಾರತ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೂ ಟ್ರಂಪ್ 11 ದುಬಾರಿ ಜೆಟ್ಗಳು ಪತನವಾಗಿವೆ ಎಂಬ ಹೇಳಿಕೆ ನೀಡಿದ್ದಾರೆ.
“ಆ ಯುದ್ಧವು ಬಿರುಸಾಗಿತ್ತು. ವಿಮಾನಗಳನ್ನು ಹೊಡೆದುರುಳಿಸಲಾಗುತ್ತಿತ್ತು. ನಾನು ಅವರಿಬ್ಬರೊಂದಿಗೂ ಫೋನ್ ಮಾತುಕತೆ ನಡೆಸಿದ್ದೆ. ನನಗೆ ಪ್ರಧಾನಿ ಮೋದಿ ಚೆನ್ನಾಗಿ ತಿಳಿದಿದ್ದರು. ಅವರು ಆತ್ಮೀಯವಾಗಿದ್ದರಿಂದ ಈ ಬಗ್ಗೆ ಮಾತನಾಡಿ ಮನವೊಲಿಸಿದ್ದೆ” ಎಂದು ಟ್ರಂಪ್ ಹೇಳಿದ್ದಾರೆ.
#WATCH | At the Board of Peace Event, US President Donald Trump says, “…He (Pakistani PM) said in front of our Chief of Staff that President Trump saved 25 million lives when he stopped the war between us and India…That war was raging. Planes were being shot down. And I got… pic.twitter.com/pm5eT7xjz3
— ANI (@ANI) February 19, 2026
“ನಾನು ಅವರಿಗೆ ಕರೆ ಮಾಡಿ, ನೀವು ಈ ಸಂಘರ್ಷವನ್ನು ಇತ್ಯರ್ಥಪಡಿಸದಿದ್ದರೆ ನಾನು ನಿಮ್ಮಿಬ್ಬರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ನೀವು ದಾಳಿ ಮುಂದುವರೆಸಿದರೆ ನಿಮ್ಮ ಎರಡೂ ದೇಶಗಳ ಮೇಲೆ ನಾನು ಶೇ. 200ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದು ಹೇಳುವ ಮೂಲಕ ಎರಡೂ ದೇಶಗಳಿಗೆ ಗಂಭೀರ ಆರ್ಥಿಕ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದೆ. ಇದರಿಂದಲೇ ಅವರು ಒಪ್ಪಿಕೊಂಡರು” ಎಂದು ಟ್ರಂಪ್ ಹೇಳಿದ್ದಾರೆ. ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರವೂ ಟ್ರಂಪ್ ಅದೇ ಹಳೆಯ ಹೇಳಿಕೆ ನೀಡುತ್ತಿರುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಈ ಕದನವಿರಾಮದಲ್ಲಿ ಟ್ರಂಪ್ ಅವರ ಪಾತ್ರವನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ. ಅವರ ಹಸ್ತಕ್ಷೇಪವನ್ನು ಸಮಯೋಚಿತ ಮತ್ತು ಪರಿಣಾಮಕಾರಿ ಎಂದು ಕರೆದಿದ್ದಾರೆ. ಆದರೆ ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇರಲಿಲ್ಲ ಎಂದು ನಿರಾಕರಿಸಿದೆ. ಎರಡು ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ ಮಾತುಕತೆಗಳ ಮೂಲಕ ದ್ವಿಪಕ್ಷೀಯವಾಗಿ ಯುದ್ಧವನ್ನು ನಿಲ್ಲಿಸಲಾಗಿದೆ ಎಂದು ಭಾರತ ಸಮರ್ಥಿಸಿಕೊಂಡಿದೆ.
2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರನ್ನು ಕೊಂದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಕಳೆದ ವರ್ಷ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:17 pm, Fri, 20 February 26